×
Ad

‘ಇಂಡಿಯಾ’ ಬದಲಿಗೆ ಬೇರೆ ಹೆಸರು ಇಡುವಂತೆ ಒತ್ತಾಯಿಸಿದ್ದೆ: ನಿತೀಶ್

Update: 2024-01-31 20:55 IST

 ನಿತೀಶ್ ಕುಮಾರ್ | Photo: PTI 

ಪಾಟ್ನಾ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳು ಕಟ್ಟಿರುವ ಮೈತ್ರಿಕೂಟಕ್ಕೆ ‘ಇಂಡಿಯನ್ ನ್ಯಾಶನಲ್ ಡೆವೆಲಪ್ಮೆಂಟ್ ಇನ್ಕ್ಲುಸಿವ್ ಅಲಯನ್ಸ್’ ಅಥವಾ ‘ಇಂಡಿಯಾ’ ಎಂಬ ಹೆಸರಿಡದಂತೆ ನಾನು ಕಾಂಗ್ರೆಸ್ ಮತ್ತು ಇತರ ಸದಸ್ಯರನ್ನು ಒತ್ತಾಯಿಸಿದ್ದೆ ಎಂದು ಇತ್ತೀಚೆಗೆ ಬಿಹಾರ ಮುಖ್ಯಮಂತ್ರಿಯಾಗಿ ಹೊಸದಾಗಿ ಅಧಿಕಾರ ವಹಿಸಿಕೊಂಡಿರುವ ನಿತೀಶ್ ಕುಮಾರ್ ಬುಧವಾರ ಹೇಳಿದ್ದಾರೆ.

ಮೈತ್ರಿಕೂಟ ಒಕ್ಕೂಟಕ್ಕೆ ಬುನಾದಿ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಿತೀಶ್ ಕುಮಾರ್, ಮೂರು ದಿನಗಳ ಹಿಂದೆ ಬಿಜೆಪಿಯೊಂದಿಗೆ ಕೈಜೋಡಿಸಿ ಆ ಪಕ್ಷದ ಬೆಂಬಲದೊಂದಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

‘ಇಂಡಿಯಾ’ ಎದುರಾಳಿ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್ಡಿಎ) ಜೊತೆಗೆ ಕೈಜೋಡಿಸುವ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿರುವ ಸಂಯುಕ್ತ ಜನತಾ ದಳ (ಜೆಡಿಯು) ನಾಯಕ, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಸ್ಥಾನ ಹೊಂದಾಣಿಕೆಗೆ ಸಂಬಂಧಿಸಿ ‘ಇಂಡಿಯಾ’ವು ನಿಷ್ಕ್ರಿಯವಾಗಿತ್ತು ಎಂದು ಆರೋಪಿಸಿದರು.

‘‘ಮೈತ್ರಿಕೂಟಕ್ಕೆ ಬೇರೆ ಹೆಸರು ಆರಿಸುವಂತೆ ನಾನು ಅವರನ್ನು ಒತ್ತಾಯಿಸುತ್ತಿದ್ದೆ. ಆದರೆ, ಅವರು ಆಗಲೇ ಆ ಹೆಸರನ್ನು ಅಂತಿಮಗೊಳಿಸಿದ್ದರು. ನಾನು ಮೈತ್ರಿಕೂಟಕ್ಕಾಗಿ ಕಠಿಣ ಪರಿಶ್ರಮ ಪಡುತ್ತಿದ್ದೆ. ಅವರು ಒಂದೂ ಕೆಲಸ ಮಾಡಲಿಲ್ಲ. ಯಾವ ಪಕ್ಷವು ಎಷ್ಟು ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ ಎನ್ನುವುದನ್ನು ಈಗಲೂ ಅವರು ನಿರ್ಧರಿಸಿಲ್ಲ. ಹಾಗಾಗಿಯೇ ನಾನು ಅವರನ್ನು ಬಿಟ್ಟು ಮೊದಲು ನಾನು ಯಾರೊಂದಿಗೆ ಇದ್ದೆನೋ ಅವರ ಬಳಿಗೆ ಬಂದಿದ್ದೇನೆ. ಬಿಹಾರದ ಜನರಿಗಾಗಿ ಕೆಲಸ ಮಾಡುವುದನ್ನು ನಾನು ಮುಂದುವರಿಸುತ್ತೇನೆ’’ ಎಂದು ಅವರು ಹೇಳಿರುವುದಾಗಿ ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯ ವಿರುದ್ಧ ವಾಗ್ದಾಳಿ ನಡೆಸಿರುವ ನಿತೀಶ್ ಕುಮಾರ್, ಬಿಹಾರ ಜಾತಿ ಗಣತಿಯ ಶ್ರೇಯವನ್ನು ತಪ್ಪಾಗಿ ಪಡೆಯಲು ಅವರು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News