ತಮ್ಮ ಡೆತ್ ನೋಟ್ ನಲ್ಲಿ ಜಾತಿ ತಾರತಮ್ಯವನ್ನು ಉಲ್ಲೇಖಿಸಿರುವ ಐಪಿಎಸ್ ಅಧಿಕಾರಿ ವೈ. ಪೂರಣ್ ಕುಮಾರ್
ಡೆತ್ ನೋಟ್ ನಲ್ಲಿ ಹಲವು ಉನ್ನತ ಅಧಿಕಾರಿಗಳ ಹೆಸರು
ವೈ. ಪೂರಣ್ ಕುಮಾರ್ | Photo Credi : indianexpress.com
ಚಂಡೀಗಢ: ಮಂಗಳವಾರ ಚಂಡೀಗಢದ ತಮ್ಮ ನಿವಾಸದಲ್ಲಿ ಗುಂಡು ಹೊಡೆದುಕೊಂಡು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದ 52 ವರ್ಷದ ಐಪಿಎಸ್ ಅಧಿಕಾರಿ ವೈ.ಪೂರಣ್ ಕುಮಾರ್ ಅವರು ತಮ್ಮ ಡೆತ್ ನೋಟ್ ನಲ್ಲಿ ಜಾತಿ ಆಧಾರಿತ ತಾರತಮ್ಯ, ಸಾರ್ವಜನಿಕ ಅವಮಾನ, ಗುರಿಯಾಗಿಸಿಕೊಂಡು ಮಾನಸಿಕ ಕಿರುಕುಳ ಹಾಗೂ ದೌರ್ಜನ್ಯ ನಡೆಸಿದ ಆರೋಪಗಳನ್ನು ಮಾಡಿದ್ದಾರೆ.
ಅವರ ಡೆತ್ ನೋಟ್ ನಲ್ಲಿ ಹರ್ಯಾಣ ಪೊಲೀಸ್ ಇಲಾಖೆಯ ಒಂಭತ್ತು ಮಂದಿ ಕರ್ತವ್ಯನಿರತ ಐಪಿಎಸ್ ಅಧಿಕಾರಿಗಳು, ಓರ್ವ ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಮೂವರು ನಿವೃತ್ತ ಐಎಎಸ್ ಅಧಿಕಾರಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.
ಈ ನಡುವೆ, ಜಪಾನ್ ಗೆ ಅಧಿಕೃತ ಪ್ರವಾಸಕ್ಕೆ ತೆರಳಿದ್ದ ಪೂರಣ್ ಕುಮಾರ್ ಅವರ ಪತ್ನಿ, ಐಎಎಸ್ ಅಧಿಕಾರಿ ಅಮ್ನೀತ್ ಪಿ. ಕುಮಾರ್ ಬುಧವಾರ ಸ್ವದೇಶಕ್ಕೆ ಮರಳಿದ್ದು, “ತಮ್ಮ ಪತಿಯ ವಿರುದ್ಧ ದಾಖಲಾಗಿದ್ದ ಕ್ಷುಲ್ಲಕ ಹಾಗೂ ದುರುದ್ದೇಶಪೂರಿತ ದೂರಿನಲ್ಲಿ ಅವರನ್ನು ಸಿಲುಕಿಸಲು ಸುಳ್ಳು ಸಾಕ್ಷಿಗಳ ಸೃಷ್ಟಿಯ ಯೋಜಿತ ಪಿತೂರಿ ನಡೆಸಿದ್ದಾರೆ” ಎಂದು ಆರೋಪಿಸಿ, ಹರ್ಯಾಣ ಪೊಲೀಸ್ ಮಹಾ ನಿರ್ದೇಶಕ ಶತ್ರುಜೀತ್ ಕಪೂರ್ ಹಾಗೂ ರೋಹ್ಟಕ್ ನ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜರ್ನಿಯ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ದೂರು ಸಲ್ಲಿಸಿದ್ದಾರೆ.
ಆದರೆ, ಈ ಆರೋಪಗಳನ್ನು ಅಲ್ಲಗಳೆದಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ಸರಕಾರ ಭ್ರಷ್ಟಾಚಾರದ ವಿರುದ್ಧ ಯುದ್ಧ ಸಾರಿರುವುದರಿಂದ ಈ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಪ್ರತ್ಯಾರೋಪ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಚಂಡೀಗಢದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಡೆತ್ ನೋಟ್ ಒಂದನ್ನು ವಶಪಡಿಸಿಕೊಳ್ಳಿಲಾಗಿದ್ದು, ಅದರಲ್ಲಿ ತನಗೆ ಆಡಳಿತದೊಂದಿಗಿದ್ದ ಸಮಸ್ಯೆಗಳನ್ನು ವೈ.ಪೂರಣ್ ಕುಮಾರ್ ಉಲ್ಲೇಖಿಸಿದ್ದಾರೆ. ಆ ಪತ್ರದಲ್ಲಿ ಹರ್ಯಾಣ ಪೊಲೀಸ್ ಇಲಾಖೆಯ ಕೆಲವು ಹಿರಿಯ ಅಧಿಕಾರಿಗಳ ಹೆಸರನ್ನೂ ಉಲ್ಲೇಖಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ” ಎಂದು ಹೇಳಿದ್ದಾರೆ.
“ಡೆತ್ ನೋಟ್ ಹಾಗೂ ಅದರಲ್ಲಿನ ಆರೋಪಗಳ ಕುರಿತು ಸದ್ಯ ವಿಚಾರಣೆ ನಡೆಸಲಾಗುತ್ತಿರುವುದರಿಂದ, ಹರ್ಯಾಣದ ಹಿರಿಯ ಅಧಿಕಾರಿಗಳ ಹೆಸರನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ” ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.