ISROದಿಂದ PSLV-C62 ಮೂಲಕ 16 ಉಪಗ್ರಹಗಳ ಯಶಸ್ವಿ ಉಡಾವಣೆ
ಶ್ರೀಹರಿಕೋಟಾ, ಜ.12: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 16 ಉಪಗ್ರಹಗಳನ್ನು ಹೊತ್ತೊಯ್ದ PSLV-C62 ರಾಕೆಟನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಈ ಮೂಲಕ 2026ರ ಮೊದಲ ಉಡಾವಣೆಗೆ ಚಾಲನೆ ನೀಡಿದೆ.
ಸೋಮವಾರ ಬೆಳಿಗ್ಗೆ 10.18ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆ ನಡೆದಿದ್ದು, ಇದು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV)ನ 64ನೇ ಹಾರಾಟವಾಗಿದೆ.
ಸುಮಾರು 260 ಟನ್ ತೂಕದ PSLV-C62/DL ರೂಪಾಂತರವು ಎರಡು ಸ್ಟ್ರಾಪ್-ಆನ್ ಬೂಸ್ಟರ್ಗಳನ್ನು ಹೊಂದಿದ್ದು, DRDOನ ಕಡಲ ಕಣ್ಗಾವಲು ಮತ್ತು ಭೂ ವೀಕ್ಷಣಾ ಅಗತ್ಯಗಳಿಗಾಗಿ ಅಭಿವೃದ್ಧಿಪಡಿಸಲಾದ ಪ್ರಾಥಮಿಕ EOS-N1 (ಅನ್ವೇಶಾ) ಉಪಗ್ರಹವನ್ನು ಹೊತ್ತೊಯ್ದಿತು.
ಇದರೊಂದಿಗೆ, ಭಾರತೀಯ ಸ್ಟಾರ್ಟ್ಅಪ್ಗಳು, ವಿಶ್ವವಿದ್ಯಾಲಯಗಳು ಹಾಗೂ ಅಂತರರಾಷ್ಟ್ರೀಯ ಪಾಲುದಾರರಿಂದ ಬಂದ 15 ಸಹ-ಪ್ರಯಾಣಿಕ ಉಪಗ್ರಹಗಳನ್ನು ಸೇರಿಸಿ ಒಟ್ಟು 16 ಉಪಗ್ರಹಗಳನ್ನು ಭೂಮಿಯಿಂದ ಸುಮಾರು 200 ರಿಂದ 500 ಕಿಲೋಮೀಟರ್ ಎತ್ತರದ ಸೂರ್ಯ-ಸಿಂಕ್ರೊನಸ್ ಧ್ರುವ ಕಕ್ಷೆಗೆ ಕಳುಹಿಸಲಾಗಿದೆ. ಸ್ಪೇನ್ನ ಕೆಸ್ಟ್ರೆಲ್ ಇನಿಶಿಯಲ್ ಡೆಮಾನ್ಸ್ಟ್ರೇಟರ್ (KID) ಸೇರಿದಂತೆ ಮರುಬಳಕೆ ತಾಂತ್ರಿಕ ಪ್ರಯೋಗಗಳಿಗೆ ಸಂಬಂಧಿಸಿದ ಉಪಗ್ರಹಗಳೂ ಈ ಮಿಷನ್ನಲ್ಲಿ ಸೇರಿವೆ.
ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL) ನಿರ್ವಹಣೆಯಲ್ಲಿನ ಇದು ಒಂಭತ್ತನೇ ವಾಣಿಜ್ಯ ರೈಡ್ ಶೇರ್ ಉಡಾವಣೆಯಾಗಿದೆ. ಜಾಗತಿಕ ಸ್ಪರ್ಧೆ ಮತ್ತು ಖಾಸಗಿ ವಲಯದ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯ ನಡುವೆ ಈ ಉಡಾವಣೆ ದೇಶದ ಬಾಹ್ಯಾಕಾಶದ ಆರ್ಥಿಕತೆಗೆ ಮತ್ತಷ್ಟು ಬಲ ತುಂಬಿದೆ.