×
Ad

ಇಸ್ರೋದ PSLV-C62 ಮಿಷನ್ ವಿಫಲ: ನಿಯಂತ್ರಣ ಕಳೆದುಕೊಂಡ ರಾಕೆಟ್, ಕಕ್ಷೆ ಸೇರದ 16 ಉಪಗ್ರಹಗಳು

Update: 2026-01-12 12:22 IST

Photo credit: PTI

ಶ್ರೀಹರಿಕೋಟಾ: ಇಸ್ರೋದ PSLV-C62 ರಾಕೆಟ್‌ ಉಡಾವಣೆ ಯಶಸ್ವಿಯಾಗಿ ಆರಂಭಗೊಂಡರೂ, ಮೂರನೇ ಹಂತದ ನಂತರ ನಿಯಂತ್ರಣ ಕಳೆದುಕೊಂಡ ಪರಿಣಾಮ ಮಿಷನ್ ವಿಫಲಗೊಂಡಿದೆ. ಇದರೊಂದಿಗೆ ಉಡಾವಣೆಯಲ್ಲಿ ಹೊತ್ತೊಯ್ಯಲಾದ ಎಲ್ಲಾ 16 ಉಪಗ್ರಹಗಳು ಬಾಹ್ಯಾಕಾಶದಲ್ಲೇ ನಿಯಂತ್ರಣ ಕಳೆದುಕೊಂಡಿವೆ. ಈ ಘಟನೆ ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಜ.12ರಂದು ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಿಗ್ಗೆ 10.17ಕ್ಕೆ 260 ಟನ್ ತೂಕದ PSLV-DL ರೂಪಾಂತರವನ್ನು ಉಡಾವಣೆ ಮಾಡಲಾಯಿತು. ರಾಕೆಟ್‌ ನ ಮೊದಲ ಹಾಗೂ ಎರಡನೇ ಹಂತಗಳು ಮತ್ತು ಅವುಗಳ ಪ್ರತ್ಯೇಕತೆ ನಿಗದಿತ ರೀತಿಯಲ್ಲಿ ಕಾರ್ಯನಿರ್ವಹಿಸಿದ ಕಾರಣ ಉಡಾವಣೆ ಆರಂಭಿಕ ಹಂತದಲ್ಲಿ ಸಂಪೂರ್ಣ ಯಶಸ್ವಿಯಂತೆ ಕಂಡಿತು.

ಆದರೆ ಮೂರನೇ ಹಂತದ ನಂತರ ಮಿಷನ್ ನಿಯಂತ್ರಣ ಕೇಂದ್ರಕ್ಕೆ ಟೆಲಿಮೆಟ್ರಿ ಮಾಹಿತಿ ಲಭ್ಯವಾಗದೆ ಮೌನ ಆವರಿಸಿತು. ಇದರಿಂದ ಉಪಗ್ರಹಗಳನ್ನು ನಿಗದಿತ ಕಕ್ಷೆಗೆ ಅಳವಡಿಸುವ ಪ್ರಕ್ರಿಯೆ ವಿಫಲವಾಗಿದೆ ಎಂಬುದು ದೃಢಪಟ್ಟಿತು. ಪರಿಣಾಮವಾಗಿ ರಾಕೆಟ್‌ ಮೂಲಕ ಕೊಂಡೊಯ್ಯಲಾದ ಎಲ್ಲಾ 16 ಉಪಗ್ರಹಗಳು ಕಕ್ಷೆಗೆ ತಲುಪದೆ ಕಳೆದುಹೋಗಿವೆ ಎಂದು ತಿಳಿದುಬಂದಿದೆ.

ಕಳೆದ ವರ್ಷ ನಡೆದ PSLV-C61 ಮಿಷನ್‌ನಲ್ಲಿಯೂ ಇದೇ ರೀತಿಯ ಕಕ್ಷೆಗೆ ಸೇರಿಸುವಾಗ ವೈಫಲ್ಯ ಎದುರಾಗಿದ್ದ ಹಿನ್ನೆಲೆಯಲ್ಲಿ, ಇತ್ತೀಚಿನ ಈ ಘಟನೆ ಇಸ್ರೋಗೆ ಮತ್ತೊಂದು ತಾಂತ್ರಿಕ ಸವಾಲಾಗಿ ಪರಿಣಮಿಸಿದೆ. ಮಿಷನ್ ವಿಫಲತೆಯ ನಿಖರ ಕಾರಣಗಳನ್ನು ಪತ್ತೆಹಚ್ಚಲು ತಾಂತ್ರಿಕ ಸಮಿತಿ ರಚಿಸಿ ಸಮಗ್ರ ತನಿಖೆ ನಡೆಸಲಾಗುತ್ತಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News