ಕಾಂಗ್ರೆಸ್ ಅಧಿಕಾರ ಹಂಚಿಕೆ ಬೇಡಿಕೆಗೆ ಡಿಎಂಕೆ ನಕಾರ
ದಿಂಡಿಗಲ್: ಸದ್ಯದಲ್ಲೇ ವಿಧಾನಸಭಾ ಚುನಾವಣೆ ನಡೆಯುವ ತಮಿಳುನಾಡಿನಲ್ಲಿ ಮುಂದಿನ ಅವಧಿಗೆ ಡಿಎಂಕೆ ಮೈತ್ರಿಕೂಟ ಅಧಿಕಾರಕ್ಕೆ ಬಂದಲ್ಲಿ ಕಾಂಗ್ರೆಸ್ ಜತೆ ಅಧಿಕಾರ ಹಂಚಿಕೆ ಮಾಡಿಕೊಳ್ಳಬೇಕು ಎಂಬ ಬೇಡಿಕೆಯನ್ನು ಡಿಎಂಕೆ ಸ್ಪಷ್ಟವಾಗಿ ತಳ್ಳಿಹಾಕಿದೆ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ರಚನೆಯಾಗುವ ಪರಿಸ್ಥಿತಿಯೇ ಬರುವುದಿಲ್ಲ ಎಂದು ಸಚಿವ ಐ.ಪೆರಿಯಸ್ವಾಮಿ ರವಿವಾರ ಸ್ಪಷ್ಟಪಡಿಸಿದ್ದಾರೆ.
ದಿಂಡಿಗಲ್ ನಲ್ಲಿ ಮಾತನಾಡಿದ ಅವರು, ತಮಿಳುನಾಡಿನಲ್ಲಿ ಸದಾ ಏಕಪಕ್ಷದ ಆಡಳಿತವಿದೆ. ಮುಂಬರುವ ಚುನಾವಣೆಯಲ್ಲಿ ಕೂಡ ಏಕಪಕ್ಷ ಬಹುಮತಗಳಿಸಲಿದ್ದು, ಈ ಸಂಪ್ರದಾಯ ಮುಂದುವರಿಯಲಿದೆ ಎಂದು ಅಭಿಪ್ರಾಯಪಟ್ಟರು. ಇದೇ ಮೊದಲ ಬಾರಿಗೆ ಡಿಎಂಕೆ ಕಾಂಗ್ರೆಸ್ ಬೇಡಿಕೆಯನ್ನು ಸ್ಪಷ್ಟವಾಗಿ ತಳ್ಳಿಹಾಕಿದೆ.
ಕಾಂಗ್ರೆಸ್ ಪಕ್ಷಕ್ಕೆ ಬೇಡಿಕೆ ಮುಂದಿಡುವ ಎಲ್ಲ ಹಕ್ಕೂ ಇದೆ. ಅದರೆ ಸಿಎಂ ಎಂ.ಕೆ.ಸ್ವಾಲಿನ್ ಅವರು ಇದನ್ನು ಒಪ್ಪಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಡಿಎಂಕೆ ಉಪ ಪ್ರಧಾನ ಕಾರ್ಯದರ್ಶಿ ಮತ್ತು ಗ್ರಾಮೀಣಾಡಳಿತ ಖಾತೆ ಸಚಿವರೂ ಆಗಿರುವ ಪೆರಿಯಸ್ವಾಮಿ ಸ್ಪಷ್ಟಪಡಿಸಿದರು. ತಮಿಳುನಾಡು ಸದಾ ಏಕಪಕ್ಷದ ಆಡಳಿತ ಹೊಂದಿದೆ. ಈ ವಿಚಾರದಲ್ಲಿ ಸಿಎಂ ನಿರ್ಧಾರ ಅಚಲ ಎಂದು ಹೇಳಿದರು.
ತಮಿಳುನಾಡಿನಲ್ಲಿ ಯಾವುದೇ ಒಂದು ಪಕ್ಷ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ. ಆದ್ದರಿಂದ ಸಮ್ಮಿಶ್ರ ಸರ್ಕಾರದ ಬಗ್ಗೆ ಚರ್ಚೆಗಳು ಈ ಬಾರಿ ನಡೆಯುತ್ತಿವೆ ಎಂದು ಕಾಂಗ್ರೆಸ್ ಸಂಸದ ಮಾಣಿಕ್ಯಂ ಠಾಗೋರ್ ಅವರು ಹೇಳಿಕೆ ನೀಡಿದ್ದರು. ಈ ಬಾರಿ ಚರ್ಚೆ ಕೇವಲ ಅಧಿಕಾರವನ್ನು ಗಳಿಸುವ ಬಗ್ಗೆ ಮಾತ್ರ ಆಗಿರದೇ ಹಂಚಿಕೆ ಮಾಡಿಕೊಳ್ಳುವ ಬಗ್ಗೆಯೂ ಇದೆ ಎಂದು ಹೇಳಿದ್ದರು.