ಇಂದಿನ ರಾಜಕೀಯ ವಾತಾವರಣ ಪ್ರಜಾಪ್ರಭುತ್ವಕ್ಕೆ ಪೂರಕವಾಗಿಲ್ಲ: ಧನ್ಕರ್
ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ | PTI
ಜೈಪುರ: ದೇಶದ ಪ್ರಸಕ್ತ ರಾಜಕೀಯ ಸ್ಥಿತಿಗತಿಯ ಬಗ್ಗೆ ಉಪ ರಾಷ್ಟ್ರಪತಿ ಜಗದೀಪ್ ಧನ್ಕರ್ ಸೋಮವಾರ ಕಳವಳ ವ್ಯಕ್ತಪಡಿಸಿದ್ದಾರೆ. ಇಂದಿನ ರಾಜಕೀಯ ವಾತಾವರಣವು ಭಾರತೀಯ ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ಆರೋಗ್ಯಕ್ಕೆ ಪೂರಕವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಜೈಪುರದ ‘ಕಾನ್‌ಸ್ಟಿಟ್ಯೂಶನ್ ಕ್ಲಬ್’ನಲ್ಲಿ ರಾಜಸ್ಥಾನ ಪ್ರಗತಿಶೀಲ ಮಂಚ ಏರ್ಪಡಿಸಿದ ‘ಸ್ನೇಹ ಮಿಲನ ಸಮಾರೋಹ’ ಕಾರ್ಯಕ್ರಮದಲ್ಲಿ ಮಾತನಾಡಿದ ಧನ್ಕರ್, ಇಂದಿನ ರಾಜಕೀಯ ಚಕಮಕಿಯ ತೀವ್ರತೆ ಮತ್ತು ಧ್ವನಿಯು ದೇಶದ ಪ್ರಜಾಸತ್ತಾತ್ಮಕ ಮತ್ತು ಸಾಮಾಜಿಕ ಹಂದರಕ್ಕೆ ಮುಳುವಾಗಿದೆ ಎಂದು ಹೇಳಿದರು.
ನಾನು ಯಾರ ಮೇಲೆಯೂ ಒತ್ತಡ ಹೇರುವುದಿಲ್ಲ ಮತ್ತು ನಾನು ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಉಪರಾಷ್ಟ್ರಪತಿ ನುಡಿದರು.
‘‘ಇಂದಿನ ರಾಜಕೀಯ ವಾತಾವರಣವು ನಮ್ಮ ಪ್ರಜಾಪ್ರಭುತ್ವಕ್ಕೆ ಪೂರಕವೂ ಅಲ್ಲ, ನಮ್ಮ ಪ್ರಾಚಿನ ನಾಗರಿಕ ಮೌಲ್ಯಗಳಿಗೆ ಹೊಂದುವುದೂ ಇಲ್ಲ. ರಾಜಕೀಯ ಎದುರಾಳಿಗಳು ಶತ್ರುಗಳಲ್ಲ. ಗಡಿಯಾಚೆಗೆ ಶತ್ರುಗಳು ಇರಬಹುದು, ಆದರೆ ದೇಶದೊಳಗೆ ಯಾವುದೇ ಶತ್ರು ಇರಬಾರದು’’ ಎಂದು ಧನ್ಕರ್ ಹೇಳಿದರು.
ಸಂಸತ್‌ನಲ್ಲಿನ ನಡವಳಿಕೆಯು ಘನತೆಯಿಂದ ಕೂಡಿರಬೇಕು ಎಂದು ಹೇಳಿದ ಅವರು, ಶಾಸನ ಸಭೆಗಳಲ್ಲಿ ಜನಪ್ರತಿನಿಧಿಗಳ ವರ್ತನೆಯು ಪ್ರಜಾಪ್ರಭುತ್ವದ ಸಂಸ್ಥೆಗಳ ಮೇಲೆ ಜನರು ಇಟ್ಟಿರುವ ನಂಬಿಕೆ ಕುಸಿಯುವಂತೆ ಮಾಡಬಹುದು ಎಂದು ಅಭಿಪ್ರಾಯಪಟ್ಟರು.
‘‘ಪ್ರಜಾಪ್ರಭುತ್ವದ ದೇಗುಲಗಳಲ್ಲಿ ನಡೆಯುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತದೆ. ಈ ಸಂಸ್ಥೆಗಳ ಪಾವಿತ್ರ್ಯವನ್ನು ಕಾಪಾಡದಿದ್ದರೆ, ಜನರು ಪರ್ಯಾಯ ವ್ಯವಸ್ಥೆಯನ್ನು ಕೇಳುತ್ತಾರೆ’’ ಎಂದು ಉಪರಾಷ್ಟ್ರಪತಿ ನುಡಿದರು. ಆದರೆ, ಆ ಪರ್ಯಾಯ ವ್ಯವಸ್ಥೆಗಳು ಯಾವುದು ಎನ್ನುವುದನ್ನು ಅವರು ವಿವರಿಸಲಿಲ್ಲ.