ಜಗದೀಪ್ ಧನ್ಕರ್‌ಗೆ ಗೌರವಯುತ ವಿದಾಯಕ್ಕೆ ಕಾಂಗ್ರೆಸ್ ಆಗ್ರಹ; ಮೌನಕ್ಕೆ ಶರಣಾದ ಕೇಂದ್ರ
ಜಗದೀಪ್ ಧನ್ಕರ್ | PC ; PTI
ಹೊಸದಿಲ್ಲಿ: ಜಗದೀಪ್ ಧನ್ಕರ್ ಅವರ ದಿಢೀರ್ ರಾಜೀನಾಮೆಯನ್ನು ಪ್ರಶ್ನಿಸುವುದನ್ನು ಕಾಂಗ್ರೆಸ್ ಮುಂದುವರಿಸಿದ್ದರೂ, ಅವರಿಗೆ ಗೌರವಯುತ ವಿದಾಯ ಸಮಾರಂಭಕ್ಕೆ ಆಗ್ರಹಿಸಿದೆ. ಆದರೆ ಈ ಬಗ್ಗೆ ಕೇಂದ್ರ ಸರಕಾರವು ಈವರೆಗೂ ಮೌನಕ್ಕೆ ಶರಣಾಗಿದೆ.
ಧನ್ಕರ್ ರಾಜೀನಾಮೆ ಕುರಿತು ರಾಜಕೀಯ ಗದ್ದಲದ ನಡುವೆಯೇ ಕಾಂಗ್ರೆಸ್ ಈ ಬೇಡಿಕೆಯನ್ನು ಮಂಡಿಸಿದೆ. ಅವರು ಆರೋಗ್ಯ ಕಾರಣಗಳಿಂದಾಗಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗಿದ್ದರೂ ಪ್ರತಿಪಕ್ಷಗಳ ನಾಯಕರು ಸರಕಾರದಿಂದ ಸ್ಪಷ್ಟನೆಗಾಗಿ ಒತ್ತಾಯಿಸುತ್ತಲೇ ಇದ್ದಾರೆ.
ಬುಧವಾರ ಸಂಜೆ ನಡೆದ ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಈ ಬೇಡಿಕೆಯನ್ನು ಎತ್ತಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಆದಾಗ್ಯೂ ಸರಕಾರವು ಮೌನಕ್ಕೆ ಶರಣಾಗಿದೆ, ಕೇಂದ್ರ ಸಚಿವರಾದ ಜೆ.ಪಿ.ನಡ್ಡಾ ಮತ್ತು ಕಿರಣ ರಿಜಿಜು ಬೇಡಿಕೆಗೆ ಪ್ರತಿಕ್ರಿಯಿಸಿಲ್ಲ.
ರಮೇಶ ಅವರ ಬೇಡಿಕೆಯನ್ನು ಇತರ ಯಾವುದೇ ಪ್ರತಿಪಕ್ಷ ನಾಯಕರು ಬೆಂಬಲಿಸಿಲ್ಲ ಎಂದೂ ಮೂಲಗಳು ತಿಳಿಸಿದವು.
ಮೂರು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಮಾಜಿ ಉಪರಾಷ್ಟ್ರಪತಿ ಹಾಗೂ ರಾಜ್ಯಸಭೆಯ ಸಭಾಪತಿ ಧನ್ಕರ್ ಅವರಿಗೆ ಗೌರವವಯುತ ವಿದಾಯವನ್ನು ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸುತ್ತಿದೆ. ಧನ್ಕರ್ ಅವರ ಹಠಾತ್ ರಾಜೀನಾಮೆ ಕುರಿತು ಪ್ರತಿಪಕ್ಷವು ಸರಕಾರವನ್ನು ಪ್ರಶ್ನಿಸುತ್ತಿದೆ.
ನ್ಯಾ.ಯಶವಂತ ಶರ್ಮಾರ ಪದಚ್ಯುತಿಗಾಗಿ ಪ್ರತಿಪಕ್ಷಗಳ ಸಂಸದರು ಸಹಿ ಮಾಡಿದ್ದ ನೋಟಿಸ್‌ನ್ನು ಧನ್ಕರ್ ಸ್ವೀಕರಿಸಿದ ಬಳಿಕ ರಾಜೀನಾಮೆ ನೀಡುವಂತೆ ಅವರನ್ನು ಬಲವಂತಗೊಳಿಸಲಾಗಿತ್ತು ಎಂದೂ ಕಾಂಗ್ರೆಸ್ ಆರೋಪಿಸಿದೆ. ಕೆಲವು ತಿಂಗಳುಗಳ ಹಿಂದೆ ನ್ಯಾ.ವರ್ಮಾ ಅವರ ನಿವಾಸದಲ್ಲಿ ಅರೆಸುಟ್ಟ ನೋಟುಗಳ ಕಟ್ಟುಗಳು ಪತ್ತೆಯಾಗಿದ್ದು ಭಾರೀ ವಿವಾದವನ್ನು ಸೃಷ್ಟಿಸಿತ್ತು.
ನಿವೃತ್ತರಾಗುತ್ತಿರುವ ತನ್ನ ಸದಸ್ಯರಾದ ಅನ್ಬುಮಣಿ ರಾಮದಾಸ್,ವೈಕೋ,ಪಿ.ವಿಲ್ಸನ್,ಎಂ.ಷಣ್ಮುಗಂ,ಎಂ.ಮುಹಮ್ಮದ್ ಅಬ್ದುಲ್ಲಾ ಮತ್ತು ಎನ್.ಚಂದ್ರಶೇಖರನ್ ಅವರಿಗೆ ರಾಜ್ಯಸಭೆಯು ಗುರುವಾರ ವಿದಾಯ ಸಮಾರಂಭವನ್ನು ಹಮ್ಮಿಕೊಂಡಿದ್ದ ಸಂದರ್ಭದಲ್ಲಿಯೇ ಕಾಂಗ್ರೆಸ್ ತನ್ನ ಬೇಡಿಕೆಯನ್ನೆತ್ತಿದೆ.
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಸೋಮವಾರ ಧನ್ಕರ್ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಉಪರಾಷ್ಟ್ರಪತಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದರು. ನಿಗದಿಯಂತೆ ಅವರ ಅಧಿಕಾರಾವಧಿ ಆ.10.2027ರಂದು ಕೊನೆಗೊಳ್ಳಬೇಕಿತ್ತು.