×
Ad

ಇಡೀ ದೇಶವೇ ಜಗದೀಪ್ ಧನಕರ್ ಅವರ ಮಾತಿಗಾಗಿ ಕಾಯುತ್ತಿದೆ: ಕಾಂಗ್ರೆಸ್

Update: 2025-09-09 12:19 IST

ಜಗದೀಪ್ ಧನ್ಕರ್ (Photo: PTI)

ಹೊಸದಿಲ್ಲಿ: ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಕಳೆದ 50 ದಿನಗಳಿಂದ ಮೌನ ವಹಿಸಿರುವ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಹಾಗೂ ಚರ್ಚೆಗೆ ಕಾರಣವಾಗಿದೆ. ಮಂಗಳವಾರ ನಡೆಯುತ್ತಿರುವ ಉಪರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಈ ಮೌನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

ಉಪರಾಷ್ಟ್ರಪತಿ ಸ್ಥಾನಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್ ಮತ್ತು ವಿರೋಧ ಪಕ್ಷದ ಅಭ್ಯರ್ಥಿ ಬಿ. ಸುದರ್ಶನ್ ರೆಡ್ಡಿ ನಡುವೆ ನೇರ ಪೈಪೋಟಿ ನಡೆಯುತ್ತಿದೆ. ಧನ್ಕರ್ ಅವರ ಹಠಾತ್ ರಾಜೀನಾಮೆ ಈ ಚುನಾವಣೆಗೆ ಹೊಸ ತಿರುವು ನೀಡಿದ್ದು, ಬಿಜೆಪಿ ನೇತೃತ್ವದ ಎನ್‌ಡಿಎ ಗೆಲ್ಲಲೇ ಬೇಕಾದ ಅನಿವಾರ್ಯತೆಯಲ್ಲಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಅವರು ಧನ್ಕರ್ ಅವರ ಮೌನವನ್ನು ಪ್ರಶ್ನಿಸಿ ಮೋದಿ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಕಳೆದ 50 ದಿನಗಳಿಂದ ಧನ್ಕರ್ ಮೌನ ಕಾಯ್ದುಕೊಂಡಿದ್ದಾರೆ. ಇಂದು ಅವರ ಉತ್ತರಾಧಿಕಾರಿಯ ಆಯ್ಕೆಗೆ ಚುನಾವಣೆ ನಡೆಯುತ್ತಿರುವಾಗ, ಮೋದಿ ಸರ್ಕಾರದಿಂದ ರೈತರ ತೀವ್ರ ನಿರ್ಲಕ್ಷ್ಯ ಹಾಗೂ ಅಧಿಕಾರದಲ್ಲಿರುವವರ ಅಹಂಕಾರದ ಅಪಾಯಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ಬಳಿಕ ಅವರು ನೀಡಿದ ಅಭೂತಪೂರ್ವ ಮತ್ತು ಅನಿರೀಕ್ಷಿತ ರಾಜೀನಾಮೆ ಕುರಿತು ಧನ್ಕರ್ ದೇಶದ ಜನತೆಗೆ ಸ್ಪಷ್ಟನೆ ನೀಡುವುದು ಅಗತ್ಯ. ದೇಶವು ಅವರ ಧ್ವನಿಗಾಗಿ ಕಾಯುತ್ತಿದೆ,” ಎಂದು ರಮೇಶ್ ಹೇಳಿದ್ದಾರೆ.

ಚುನಾವಣಾ ತಯಾರಿಯ ಭಾಗವಾಗಿ ಸೋಮವಾರ ಎನ್‌ಡಿಎ ಹಾಗೂ ವಿಪಕ್ಷ ‘ಇಂಡಿಯಾ' ಮೈತ್ರಿಕೂಟವು ಸಂಸತ್ತಿನ ಸಂಕೀರ್ಣದಲ್ಲಿ ಪ್ರತ್ಯೇಕ ಸಭೆಗಳನ್ನು ನಡೆಸಿ, ಸಂಸದರಿಗೆ ಚುನಾವಣಾ ಪ್ರಕ್ರಿಯೆಯ ಮಾರ್ಗಸೂಚಿಗಳು ತಿಳಿಸಿ, ಅಣಕು ಸಮೀಕ್ಷೆಗಳು ನಡೆಸಿ ಹಾಗೂ ಸರಿಯಾದ ಮತದಾನಕ್ಕೆ ಸೂಚನೆಗಳು ನೀಡಿದವು.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಹಸ್ಯ ಮತದಾನ ವಿಧಾನ ಜಾರಿಯಲ್ಲಿರುವುದರಿಂದ ಪಕ್ಷಗಳ ವಿಪ್ ಗಳು ಇಲ್ಲಿ ನಗಣ್ಯ.

ಧನ್ಕರ್ ಅವರ ಮೌನ, ಚುನಾವಣಾ ಪೈಪೋಟಿ ಮತ್ತು ಬಿಜೆಪಿ-ವಿರೋಧ ಪಕ್ಷಗಳ ಸಮರದ ನಡುವೆಯೇ, ಮುಂದಿನ ರಾಜಕೀಯ ಬೆಳವಣಿಗೆಗಳತ್ತ ದೇಶದ ಕಣ್ಣು ನೆಟ್ಟಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News