ಭಾರತ- ಪಾಕ್ ನಡುವೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದೇನೆಂಬ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಜೈಶಂಕರ್
ವಿದೇಶಾಂಗ ಸಚಿವ ಎಸ್. ಜೈಶಂಕರ್ (PTI)
ಹೊಸದಿಲ್ಲಿ: ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿರುವ ಕುರಿತು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ವಿದೇಶಾಂಗ ಸಚಿವ ಎಸ್. ಜೈಶಂಕರ್ ನಿರಾಕರಿಸಿದ್ದಾರೆ. ಉಭಯ ರಾಷ್ಟ್ರಗಳ ನಡುವಿನ ನೇರ ಸಂವಹನದ ಮೂಲಕ ಯುದ್ಧವನ್ನು ನಿಲ್ಲಿಸಲಾಗಿದೆ ಎಂದು ಹೇಳಿದರು.
ನೆದರ್ಲ್ಯಾಂಡ್ಸ್ ಮೂಲದ ಎನ್ಒಎಸ್ಗೆ ನೀಡಿದ ಸಂದರ್ಶನದಲ್ಲಿ, ಉಭಯ ದೇಶಗಳ ನಡುವಿನ ಉದ್ವಿಗ್ನತೆ ಶಮನಗೊಂಡ ಬಗ್ಗೆ ವಿವರಿಸಿದ ಜೈಶಂಕರ್ "ಪರಸ್ಪರ ಮಾತನಾಡಲು ನಮಗೆ ಒಂದು ಕಾರ್ಯವಿಧಾನವಿದೆ. ಆದ್ದರಿಂದ, ಮೇ 10 ರಂದು, ಪಾಕಿಸ್ತಾನಿ ಸೇನೆಯು ಗುಂಡಿನ ದಾಳಿಯನ್ನು ನಿಲ್ಲಿಸಲು ಸಿದ್ಧವಾಗಿದೆ ಎಂದು ಸಂದೇಶವನ್ನು ಕಳುಹಿಸಿತ್ತು, ಅದಕ್ಕೆ ತಕ್ಕಂತೆ ನಾವು ಪ್ರತಿಕ್ರಿಯಿಸಿದ್ದೇವೆ." ಎಂದಿದ್ದಾರೆ.
ಎಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದನಾ ದಾಳಿಯ ಬಳಿಕ ಭಾರತ ಸೇನೆಯು "ಆಪರೇಷನ್ ಸಿಂಧೂರ್" ಕಾರ್ಯಾಚರಣೆ ಪ್ರಾರಂಭಿಸಿತ್ತು. ಬಿಕ್ಕಟ್ಟಿನ ಸಂದರ್ಭದಲ್ಲಿ ಅಮೆರಿಕ ಸೇರಿದಂತೆ ವಿವಿಧ ದೇಶಗಳು ಸಹಾಯ ಮಾಡಿದ್ದವು. ಆದರೆ, ದ್ವಿಪಕ್ಷೀಯ ಮಾತುಕತೆಯಿಂದ ನಿಜವಾದ ಪರಿಹಾರವು ದೊರೆಯಿತು ಎಂದು ಜೈಶಂಕರ್ ದೃಢಪಡಿಸಿದ್ದಾರೆ.
"ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಮತ್ತು ಉಪಾಧ್ಯಕ್ಷ ವ್ಯಾನ್ಸ್ ಕರೆ ಮಾಡಿದ್ದರು, ರುಬಿಯೊ ನನ್ನೊಂದಿಗೆ ಮಾತನಾಡಿದ್ದರು, ವ್ಯಾನ್ಸ್ ನಮ್ಮ ಪ್ರಧಾನಿಯೊಂದಿಗೆ ಮಾತನಾಡಿದ್ದರು, ಅವರು ಪಾಕಿಸ್ತಾನದ ಕಡೆಯವರೊಂದಿಗೆ ಮಾತನಾಡುತ್ತಿದ್ದರು, ಇದರ ಜೊತೆಗೆ ಕೆಲವು ಇತರ ದೇಶಗಳೂ ಇದ್ದವು, ಕೊಲ್ಲಿಯ ಕೆಲವು ದೇಶಗಳು, ಇನ್ನೂ ಕೆಲವು ದೇಶಗಳು ಇದ್ದವು" ಎಂದು ಜೈಶಂಕರ್ ಹೇಳಿದರು.
"ಅದು ಸ್ವಾಭಾವಿಕವಾಗಿ ಸಂಭವಿಸುತ್ತದೆ, ಎರಡು ದೇಶಗಳು ಸಂಘರ್ಷದಲ್ಲಿ ತೊಡಗಿರುವಾಗ, ಪ್ರಪಂಚದ ದೇಶಗಳು ಕರೆ ಮಾಡುವುದು ಸಹಜ, ಅವರ ಕಾಳಜಿ, ಅಂತಹ ಪರಿಸ್ಥಿತಿಯಲ್ಲಿ ಅವರು ಏನು ಮಾಡಬಹುದು ಎಂಬುದನ್ನು ಸೂಚಿಸುತ್ತದೆ. ಆದರೆ ಗುಂಡಿನ ದಾಳಿ ಮತ್ತು ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸುವುದು ಭಾರತ ಮತ್ತು ಪಾಕಿಸ್ತಾನದ ನಡುವೆ ನೇರವಾಗಿ ಮಾತುಕತೆ ನಡೆಸಿದ ವಿಷಯವಾಗಿತ್ತು. ನಮ್ಮೊಂದಿಗೆ ಮಾತನಾಡಿದ ಪ್ರತಿಯೊಬ್ಬರಿಗೂ, ಅಮೆರಿಕಕ್ಕೆ ಮಾತ್ರವಲ್ಲ, ಎಲ್ಲರಿಗೂ ನಾವು ಒಂದು ವಿಷಯವನ್ನು ಸ್ಪಷ್ಟಪಡಿಸಿದ್ದೇವೆ, ʼಪಾಕಿಸ್ತಾನಿಗಳು ಗುಂಡಿನ ದಾಳಿಯನ್ನು ನಿಲ್ಲಿಸಲು ಬಯಸಿದರೆ, ಅವರು ನಮಗೆ ಹೇಳಬೇಕು, ನಾವು ಅದನ್ನು ಅವರಿಂದ ಕೇಳಬೇಕು, ಅವರ ಜನರಲ್ ನಮ್ಮ ಜನರಲ್ ಕರೆ ಮಾಡಿ ಹೀಗೆ ಹೇಳಬೇಕುʼ ಮತ್ತು ಅದು ಹಾಗೇ ನಡೆಯಿತು" ಎಂದು ಅವರು ಹೇಳಿದರು.
ಅದರೆ, ಇಂದು ಬೆಳಿಗ್ಗೆ, ಟ್ರಂಪ್ ಮತ್ತೊಮ್ಮೆ ಭಾರತ ಮತ್ತು ಪಾಕಿಸ್ತಾನ ಕದನ ವಿರಾಮವನ್ನು "ವ್ಯಾಪಾರದ ಮೂಲಕ ಇತ್ಯರ್ಥಪಡಿಸಿದೆ" ಎಂದು ಹೇಳಿಕೊಂಡು, ಮಧ್ಯಸ್ಥಿಕೆ ವಹಿಸಿದಾಗಿ ಪ್ರತಿಪಾದಿಸಿದ್ದಾರೆ.