×
Ad

ಜಮ್ಮುಕಾಶ್ಮೀರ | ಶಂಕಿತ ಉಗ್ರರ ಗುಂಡಿಗೆ ವಲಸೆ ಕಾರ್ಮಿಕ ಬಲಿ

Update: 2024-10-19 21:02 IST

ಸಾಂದರ್ಭಿಕ ಚಿತ್ರ | PTI 

ಶ್ರೀನಗರ : ಜಮ್ಮು ಹಾಗೂ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಬಿಹಾರದ ವಲಸೆ ಕಾರ್ಮಿಕನೋರ್ವನನ್ನು ಶಂಕಿತ ಉಗ್ರರು ಶುಕ್ರವಾರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ.

ಗುಂಡಿನಿಂದ ಗಾಯಗೊಂಡ ಕಾರ್ಮಿಕನ ಮೃತದೇಹ ರಾಂಬಿಯಾರಾ ನದಿಯ ಜಲಾನಯನ ಪ್ರದೇಶದ ಸಮೀಪ ಪತ್ತೆಯಾಗಿದೆ. ಆತ ಉಗ್ರರ ದಾಳಿಯಲ್ಲಿ ಸಾವನ್ನಪ್ಪಿದ್ದಾನೆ ಎಂದು ಶೋಪಿಯಾನದ ಪೊಲೀಸ್ ಅಧೀಕ್ಷಕ ಅನಾಯತ್ ಅಲಿ ಚೌಧರಿ ತಿಳಿಸಿದ್ದಾರೆ.

ಮೃತಪಟ್ಟ ವಲಸೆ ಕಾರ್ಮಿಕನನ್ನು ಅಶೋಕ್ ಚೌಹಾಣ್ (30) ಎಂದು ಗುರುತಿಸಲಾಗಿದೆ. ಆತ ಜಿಲ್ಲೆಯ ಬೀದಿ ಬದಿಯಲ್ಲಿ ಜೋಳ ಮಾರಾಟ ಮಾಡುತ್ತಿದ್ದ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶಂಕಿತ ಉಗ್ರರು ಚೌಹಾಣ್ ಅವರನ್ನು ಶೋಪಿಯಾನದ ಮಲ್ಹುರಾ ಪ್ರದೇಶದಿಂದ ಅಪಹರಿಸಿದ್ದಾರೆ. ಅನಂತರ ಗುಂಡು ಹಾರಿಸಿ ಹತ್ಯೆಗೈದಿದ್ದಾರೆ ಎಂದು ಅವರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಭೂತಪೂರ್ವ ಗೆಲುವು ಸಾಧಿಸಿ ನ್ಯಾಷನಲ್ ಕಾನ್ಫರೆನ್ಸ್‌ನ ನಾಯಕ ಉಮರ್ ಅಬ್ದುಲ್ಲಾ ಅವರು ಜಮ್ಮು ಹಾಗೂ ಕಾಶ್ಮೀರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇಲ್ಲಿ ವಲಸೆ ಕಾರ್ಮಿಕರನ್ನು ಗುರಿಯಾಗಿರಿಸಿ ಉಗ್ರರು ನಡೆಸುತ್ತಿರುವ ಮೊದಲ ದಾಳಿ ಇದಾಗಿದೆ.

ವಲಸೆ ಕಾರ್ಮಿಕನ ಮೃತದೇಹ ಶುಕ್ರವಾರ ಪತ್ತೆಯಾದ ಬಳಿಕ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ, ದಕ್ಷಿಣ ಕಾಶ್ಮೀರದಲ್ಲಿ ಉಗ್ರರ ಕೈಯಲ್ಲಿ ಸಿಲುಕಿ ವಲಸೆ ಕಾರ್ಮಿಕ ಅಶೋಕ್ ಚೌಹಾಣ್ ಹತ್ಯೆಯಾದ ಸುದ್ದಿ ಕೇಳಿ ದುಃಖವಾಗಿದೆ ಎಂದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News