ಜಮ್ಮು-ಕಾಶ್ಮೀರ | ಒಳ ನುಸುಳುವ ಪ್ರಯತ್ನ ಭದ್ರತಾ ಪಡೆಯಿಂದ ಇಬ್ಬರು ಶಂಕಿತ ಉಗ್ರರ ಹತ್ಯೆ
ಸಾಂದರ್ಭಿಕ ಚಿತ್ರ | PC: NDTV
ಶ್ರೀನಗರ, ಆ. 28: ಜಮ್ಮು ಹಾಗೂ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಗುರೇಝ್‌ನ ನೌಶೇರಾ ನಾರ್ಡ್ ಸಮೀಪ ಗಡಿ ನಿಯಂತ್ರಣ ರೇಖೆಯಲ್ಲಿ ಒಳ ನುಸುಳಲು ಪ್ರಯತ್ನಿಸಿದ ಇಬ್ಬರು ಶಂಕಿತ ಉಗ್ರರನ್ನು ಸೇನೆ ಹತ್ಯೆಗೈದಿದೆ.
‘‘ಒಳನುಸುಳುವ ಪ್ರಯತ್ನದ ಸಾಧ್ಯತೆ ಕುರಿತು ಜೆಕೆಪಿ ನೀಡಿದ ಗುಪ್ತಚರ ಮಾಹಿತಿಯ ಆಧಾರದಲ್ಲಿ ಭಾರತೀಯ ಸೇನಾ ಪಡೆ ಹಾಗೂ ಪೊಲೀಸ್ ಗುರೇಝ್ ವಲಯದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿತು. ಜಾಗೃತವಾದ ಪಡೆ ಸಂಶಯಾಸ್ಪದ ಚಟುವಟಿಕೆಯನ್ನು ಗುರುತಿಸಿತು. ಶಂಕಿತ ಉಗ್ರರು ಗುಂಡಿನ ದಾಳಿ ನಡೆಸಿದರು. ಸೇನಾ ಪಡೆ ಪ್ರತಿ ದಾಳಿ ನಡೆಸಿತು. ಈ ಸಂದರ್ಭ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಶಂಕಿತ ಉಗ್ರರು ಹತರಾದರು’’ ಎಂದು ಸೇನೆಯ ಶ್ರೀನಗರ ಮೂಲದ ಚಿನ್ನಾರ್ ಕಾರ್ಪ್ಸ್ ‘ಎಕ್ಸ್’ನಲ್ಲಿ ಹೇಳಿದೆ.
ಈ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ. ಈ ಪಡೆಗಳಿಗೆ ನೆರವು ನೀಡಲು ಹೆಚ್ಚುವರಿ ಪಡೆಗಳು ಧಾವಿಸಿವೆ ಎಂದು ಅದು ತಿಳಿಸಿದೆ.
ಈ ಹಿಂದೆ ಆಗಸ್ಟ್ 25ರಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿ ವಲಯದ ತೋರಣ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ ಶಂಕಿತ ಉಗ್ರರ ಒಳ ನುಸುಳುವ ಪ್ರಯತ್ನವನ್ನು ಸೇನೆ ವಿಫಲಗೊಳಿಸಿತ್ತು.
ಉತ್ತರ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕಳೆದ 12 ದಿನಗಳಲ್ಲಿ ಭದ್ರತಾ ಪಡೆ ವಿಫಲಗೊಳಿಸುತ್ತಿರುವ ಶಂಕಿತ ಉಗ್ರರ ಮೂರನೇ ಒಳ ನುಸುಳುವ ಪ್ರಯತ್ನ ಇದಾಗಿದೆ ಎಂದು ಅದು ಹೇಳಿದೆ.