ಜಮ್ಮುಕಾಶ್ಮೀರ | ಎನ್‌ಸಿ-ಕಾಂಗ್ರೆಸ್ ನಡುವೆ ಸೀಟು ಹಂಚಿಕೆ ಒಪ್ಪಂದ
PC : PTI
ಶ್ರೀನಗರ : ಜಮ್ಮುಕಾಶ್ಮೀರ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಮಂಗಳವಾರ ಸೀಟು ಹಂಚಿಕೆಯ ಒಪ್ಪಂದಕ್ಕೆ ಬಂದಿವೆ. ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ಗಡುವು ಇಂದು ಮುಕ್ತಾಯಗೊಳ್ಳಲು ಕೆಲವು ತಾಸುಗಳಿರುವಾಗಲೇ ಉಭಯ ಪಕ್ಷಗಳ ನಡುವೆ ಸೀಟುಹಂಚಿಕೆ ಕುರಿತ ಮಾತುಕತೆ ಯಶಸ್ವಿಯಾಗಿದೆ. ಜಮ್ಮು ಕಾಶ್ಮೀರ ವಿಧಾನಸಭಾ ಚುನಾವಣೆಯು ಸೆಪ್ಟೆಂಬರ್18 ರಿಂದ ಅಕ್ಟೋಬರ್ 1ರವರೆಗೆ ಮೂರು ಹಂತಗಳಲ್ಲಿ ನಡೆಯಲಿದೆ.
ಜಮ್ಮು ಕಾಶ್ಮೀರದ 90 ವಿಧಾನಸಭಾ ಕ್ಷೇತ್ರಗಳ ಪೈಕಿ ನ್ಯಾಶನಲ್ ಕಾನ್ಫರೆನ್ಸ್ 51ರಲ್ಲಿ ಹಾಗೂ ಕಾಂಗ್ರೆಸ್ ಪಕ್ಷಗಳು 32 ಸ್ಥಾನಗಳಲ್ಲಿ ಸ್ಪರ್ಧಿಸಲಿವೆ. ಎರಡು ಸ್ಥಾನಗಳನ್ನು ಸಿಪಿಐಎ ಹಾಗೂ ಪ್ಯಾಂಥರ್ಸ್ ಪಾರ್ಟಿಗೆ ನೀಡಲಾಗುವುದೆಂದು ಕಾಂಗ್ರೆಸ್ ಪಕ್ಷದ ಜಮ್ಮು ಕಾಶ್ಮೀರ ಘಟಕದ ಅಧ್ಯಕ್ಷ ತಾರೀಕ್ ಹಾಮೀದ್ ಕಾರ್ರಾ ತಿಳಿಸಿದ್ದಾರೆ.
ಆದರೆ ಉಳಿದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಪ್ರತ್ಯೇಕವಾಗಿ ಸ್ಪರ್ಧಿಸಲು ನಿರ್ಧರಿಸಿವೆ. ಈ ಐದು ಕ್ಷೇತ್ರಗಳಲ್ಲಿ ತಮ್ಮ ನಡುವೆ ಸ್ನೇಹಯುತ ಸ್ಪರ್ಧೆಯಿರುವುದಾಗಿ ಅವು ಹೇಳಿವೆ. ಸೀಟು ಹಂಚಿಕೆಯಲ್ಲಿನ ಭಿನ್ನಾಭಿಪ್ರಾಯಗಳನ್ನು ಸಂಪೂರ್ಣವಾಗಿ ನಿವಾರಿಸಲು ಎರಡೂ ಪಕ್ಷಗಳಿಗೆ ಸಾಧ್ಯವಾಗಿಲ್ಲವೆಂಬುದನ್ನು ಸೂಚಿಸಿದೆ. ಸೀಟು ಹಂಚಿಕೆಯ ಕುರಿತ ಮಾತುಕತೆಗಾಗಿ ಕಾಂಗೆಸ್ ಪಕ್ಷವು ಕೆ.ಸಿ.ವೇಣುಗೋಪಾಲ್ ಸೇರಿದಂತೆ ಇಬ್ಬರು ಹೈಕಮಾಂಡ್ ಮುಖಂಡರನ್ನು ಶ್ರೀನಗರಕ್ಕೆ ಕಳುಹಿಸಿತ್ತು.
ಉಭಯ ಪಕ್ಷಗಳ ನಡುವೆ ಸೀಟು ಹಂಚಿಕೆಯ ಒಪ್ಪಂದ ಏರ್ಪಟ್ಟ ಬಳಿಕ ಫಾರೂಕ್ ಅಬ್ದುಲ್ಲಾ ಅವರು ಶ್ರೀನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ, ‘‘ ಇಲ್ಲಿ ಜನರನ್ನು ವಿಭಜಿಸಲು ಯತ್ನಿಸುತ್ತಿರುವ ವ್ಯಕ್ತಿಗಳು ವಿರುದ್ಧ ಪ್ರಚಾರಾಂದೋಲನವನ್ನು ನಾವು ಆರಂಭಿಸಿದ್ದೇವೆ. ಕೋಮುವಾದವನ್ನು ಪ್ರಚೋದಿಸುv, ದೇಶವನ್ನು ವಿಭಜಿಸುವ ಶಕ್ತಿಗಳ ವಿರುದ್ಧ ಹೋರಾಡಲು ಇಂಡಿಯಾ ಮೈತ್ರಿಕೂಟ ರೂಪುಗೊಂಡಿದೆ. ಕಾಂಗ್ರೆಸ್ ಹಾಗೂ ನ್ಯಾಶನಲ್ ಕಾನ್ಫರೆನ್ಸ್ ಜೊತೆಯಾಗಿ ಚುನಾವಣೆಯಲ್ಲಿ ಹೋರಾಡಲಿದೆ’’ ಎಂದರು.