×
Ad

ಜಾವೇದ್ ಅಖ್ತರ್ ಪಾಲ್ಗೊಳ್ಳಲಿದ್ದ ಕಾರ್ಯಕ್ರಮದ ಮಂದೂಡಿಕೆ: ಪಶ್ಚಿಮ ಬಂಗಾಳದ ಉರ್ದು ಅಕಾಡೆಮಿಗೆ ನಾಗರಿಕ ಹಕ್ಕುಗಳ ಗುಂಪುಗಳ ಟೀಕೆ

Update: 2025-09-02 20:29 IST

PC : thehindu.com

ಕೋಲ್ಕತಾ,ಸೆ.2: ಕವಿ-ಗೀತರಚನೆಕಾರ ಜಾವೇದ್ ಅಖ್ತರ್ ಅವರು ಭಾಗವಹಿಸುವುದನ್ನು ಇಸ್ಲಾಮಿಕ್ ಗುಂಪುಗಳು ಆಕ್ಷೇಪಿಸಿದ ಬಳಿಕ ನಾಲ್ಕು ದಿನಗಳ ಸಾಹಿತ್ಯ ಕಾರ್ಯಕ್ರಮವನ್ನು ಮುಂದೂಡಿದ್ದಕ್ಕಾಗಿ ನಾಗರಿಕ ಹಕ್ಕುಗಳ ಗುಂಪುಗಳು ಪಶ್ಚಿಮ ಬಂಗಾಳ ಉರ್ದು ಅಕಾಡೆಮಿಯನ್ನು ಟೀಕಿಸಿವೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

‘ಹಿಂದಿ ಫಿಲ್ಮೋ ಮೆ ಉರ್ದು ಕಿ ಕಿರ್ದಾರ್’ ಎಂಬ ಕಾರ್ಯಕ್ರಮವು ರವಿವಾರದಿಂದ ಬುಧವಾರದವರೆಗೆ ಕೋಲ್ಕತಾದಲ್ಲಿ ನಡೆಯಲಿತ್ತು ಮತ್ತು ಸೋಮವಾರ ಅಖ್ತರ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದರು.

ಆದರೆ ಶನಿವಾರ ಉರ್ದು ಅಕಾಡೆಮಿಯ ಕಾರ್ಯದರ್ಶಿ ನುಜಾಹತ್ ಝೈನಾಬ್ ಅವರು,‘ಅನಿವಾರ್ಯ ಸಂದರ್ಭಗಳಿಂದಾಗಿ’ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದು ಪ್ರಕಟಿಸಿದ್ದರು.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಅಕಾಡೆಮಿಯ ಅಧ್ಯಕ್ಷೆಯಾಗಿದ್ದಾರೆ. ಕಾರ್ಯಕ್ರಮವನ್ನು ರದ್ದುಗೊಳಿಸಿದ್ದನ್ನು ಖಂಡಿಸಿರುವ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಡೆಮಾಕ್ರಟಿಕ್ ರೈಟ್ಸ್, ಸರಕಾರವು ಜಾತ್ಯತೀತತೆಯನ್ನು ರಕ್ಷಿಸಲು ಸಾಕಷ್ಟು ಕೆಲಸ ಮಾಡುತ್ತಿಲ್ಲ ಎಂದು ಹೇಳಿದೆ.

ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅಸೋಸಿಯೇಷನ್‌ ನ ಪ್ರಧಾನ ಕಾರ್ಯದರ್ಶಿ ರಂಜಿರ್ ಸುರ್ ಅವರು, ಕಾರ್ಯಕ್ರಮವನ್ನು ಪುನರಾರಂಭಿಸವಂತೆ ಸರಕಾರಕ್ಕೆ ಮನವಿ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ನಿರ್ದಿಷ್ಟ ಗುಂಪಿಗೆ ಕೋಪವನ್ನುಂಟು ಮಾಡಲು ಸರಕಾರವು ಬಯಸುವುದಿಲ್ಲ, ಹೀಗಾಗಿ ಇದು ಚುನಾವಣೆಗೆ ಮೊದಲು ರಾಜಕೀಯ ನಿರ್ಧಾರವಾಗಿದೆ ಎಂದು ಹೇಳಿದರು.

‘ಭಾರತವು ಹಿಂದು ರಾಷ್ಟ್ರವೂ ಅಲ್ಲ,ಇಸ್ಲಾಮಿಕ್ ದೇಶವೂ ಅಲ್ಲ ಮತ್ತು ಬದುಕುವ,ಮುಕ್ತವಾಗಿ ಮಾತನಾಡುವ ಹಕ್ಕು ಹೊಂದಿರುವ ಬಹಳಷ್ಟು ನಾಸ್ತಿಕರು ಈ ದೇಶದಲ್ಲಿದ್ದಾರೆ ’ ಎಂದು ಮಾನವ ಹಕ್ಕುಗಳ ಕಾರ್ಯಕರ್ತೆ ಶಬನಂ ಹಾಶ್ಮಿ ಅವರು ಎಕ್ಸ್ ಪೋಸ್ಟ್‌ ನಲ್ಲಿ ಹೇಳಿದ್ದಾರೆ.

ತಾನು ನಾಸ್ತಿಕ ಎಂದು ಅಖ್ತರ್ ಹೇಳಿದ್ದಾರೆ.

ಇಸ್ಲಾಮಿಕ್ ಸಂಘಟನೆ ಜಮೀಯತ್ ಉಲಮಾ-ಇ-ಹಿಂದ್‌ ನ ನಗರ ಶಾಖೆಯಾಗಿರುವ ಜಮೀಯತ್ ಉಲೇಮಾ ಕೋಲ್ಕತಾ ಅಖ್ತರ್‌ ಗೆ ಆಹ್ವಾನವನ್ನು ಪ್ರತಿಭಟಿಸಿದ ಬಳಿಕ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ ಎಂದು ಸುದ್ದಿಸಂಸ್ಥೆಯು ವರದಿ ಮಾಡಿದೆ.

ಜಮೀಯತ್ ಉಲೇಮಾ ಕೋಲ್ಕತಾದ ಪ್ರಧಾನ ಕಾರ್ಯದರ್ಶಿ ಝಿಲ್ಲೂರ್ ರಹಮಾನ್ ಆರಿಫ್ ಅವರು ಅಖ್ತರ್‌ ಗೆ ಆಹ್ವಾನವು ಸೃಷ್ಟಿಸಿರುವ ಅಸಮಾಧಾನದ ಕುರಿತು ಗುರುವಾರ ಉರ್ದು ಅಕಾಡೆಮಿಗೆ ಪತ್ರವನ್ನು ಬರೆದಿದ್ದರು ಎಂದು ವರದಿಯು ತಿಳಿಸಿದೆ.

ಅಖ್ತರ್ ಇಸ್ಲಾಮ್, ಮುಸ್ಲಿಮರು ಮತ್ತು ಅಲ್ಲಾಹ್ ವಿರುದ್ಧ ಬಹಳಷ್ಟು ಅಸಂಬಂದ್ಧ ಮಾತುಗಳನ್ನಾಡಿದ್ದಾರೆ. ಈ ವ್ಯಕ್ತಿ ಮನುಷ್ಯನಲ್ಲ, ಮಾನವ ರೂಪದಲ್ಲಿರುವ ದೆವ್ವ ಎಂದು ಆರಿಫ್ ಹೇಳಿದ್ದನ್ನು ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.

‘ಅಖ್ತರ್ ನಾಸ್ತಿಕರಾಗಿರಬಹುದು.ಅದರಿಂದ ನಮಗೇನೂ ಸಮಸ್ಯೆಯಿಲ್ಲ. ಆದರೆ ಇತರರ ಧರ್ಮಗಳನ್ನು ಅವಮಾನಿಸುವ ಹಕ್ಕು ಅವರಿಗಿಲ್ಲ’ ಎಂದು ಆರಿಫ್ ಹೇಳಿದ್ದಾಗಿ ಸುದ್ದಿಸಂಸ್ಥೆಯು ವರದಿ ಮಾಡಿದೆ.

ಅಖ್ತರ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ 2007ರಲ್ಲಿ ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರು ಬಂಗಾಳವನ್ನು ತೊರೆಯುವುದನ್ನು ಅನಿವಾರ್ಯವಾಗಿಸಿದ್ದ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗುವುದು ಎಂದು ಆರಿಫ್ ತನ್ನ ಪತ್ರದಲ್ಲಿ ಎಚ್ಚರಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News