ಮಾನಹಾನಿ ಪ್ರಕರಣ | ಸಂಸದೆ ಕಂಗನಾ ವಿರುದ್ಧ ಜಾಮೀನುರಹಿತ ವಾರೆಂಟ್‌ಗೆ ಜಾವೇದ್ ಅಖ್ತರ್ ಮನವಿ
Photo : indiatoday
ಮುಂಬೈ : ನ್ಯಾಯಾಲಯಕ್ಕೆ ನಿರಂತರವಾಗಿ ಗೈರು ಹಾಜರಾಗುತ್ತಿರುವ ನಟಿ ಹಾಗೂ ಮಂಡಿ ಲೋಕಸಭಾ ಕ್ಷೇತ್ರದ ಹಾಲಿ ಸಂಸದೆ ಕಂಗನಾ ರಣಾವತ್ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಬೇಕು ಎಂದು ಕೋರಿ ಬಾಲಿವುಡ್ ಚಿತ್ರ ಸಾಹಿತಿ ಜಾವೇದ್ ಅಖ್ತರ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.
ಚಿತ್ರ ಸಾಹಿತಿ ಜಾವೇದ್ ಅಖ್ತರ್ ದಾಖಲಿಸಿರುವ ಮಾನಹಾನಿ ಪ್ರಕರಣದಲ್ಲಿ ಕಂಗನಾ ರಣಾವತ್ ಶನಿವಾರ ನ್ಯಾಯಾಲಯಕ್ಕೆ ಹಾಜರಾಗಬೇಕಿತ್ತಾದರೂ, ಅವರು ಗೈರಾಗಿದ್ದರು. ಹೀಗಾಗಿ, ತಮಗೆ ಖಾಯಂ ಹಾಜರಾತಿ ವಿನಾಯಿತಿ ನೀಡಬೇಕು ಎಂದು ಕಂಗನಾ ರಣಾವತ್ ಸಲ್ಲಿಸಿದ್ದ ಮನವಿಯನ್ನು ಸೆಷನ್ಸ್ ನ್ಯಾಯಾಲಯವಲ್ಲದೆ, ಬಾಂಬೆ ಹೈಕೋರ್ಟ್ ಕೂಡಾ ತಿರಸ್ಕರಿಸಿರುವುದನ್ನು ಉಲ್ಲೇಖಿಸಿ, ಅವರ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಗೊಳಿಸಬೇಕು ಎಂದು ಜಾವೇದ್ ಅಖ್ತರ್ ಪರ ವಕೀಲ ಜಯ್ ಭಾರದ್ವಾಜ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
"ಆರೋಪಿ ಕಂಗನಾ ರಣಾವತ್ ಅವರ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದ್ದರೂ, ವಿವಿಧ ದಿನಾಂಕಗಳಂದು ಅವರು ನ್ಯಾಯಾಲಯದೆದುರು ಹಾಜರಾಗಿರಲಿಲ್ಲ ಹಾಗೂ ಹಾಜರಾತಿ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ, ಅವರ ವಿರುದ್ಧ ಮಾರ್ಚ್ 1, 2021ರಲ್ಲಿ ಜಾಮೀನುಸಹಿತ ವಾರೆಂಟ್ ಕೂಡಾ ಜಾರಿಯಾಗಿತ್ತು" ಎಂಬುದರತ್ತ ಜಾವೇದ್ ಅಖ್ತರ್ ಅವರ ವಕೀಲ ಭಾರದ್ವಾಜ್ ಬೊಟ್ಟು ಮಾಡಿದ್ದಾರೆ.
ಜಾಮೀನುಸಹಿತ ವಾರೆಂಟ್ ಜಾರಿಯಾಗಿದ್ದಾಗ ಕಂಗನಾ ರಣಾವತ್ ನ್ಯಾಯಾಲಯದ ಮುಂದೆ ಹಾಜರಾಗಿದ್ದರಿಂದ ಆ ವಾರೆಂಟ್ ರದ್ದುಗೊಂಡಿತ್ತು. ಆದರೆ, ಜಾವೇದ್ ಅಖ್ತರ್ ಪರ ವಕೀಲರ ಅರ್ಜಿಯನ್ನು ತಡೆ ಹಿಡಿದಿರುವ ನ್ಯಾಯಾಲಯವು, ಕಂಗನಾ ರಣಾವತ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ನಿರ್ದೇಶನ ನೀಡಿತು. ಈ ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಅವರ ಪರ ವಕೀಲರು, ಮುಂದಿನ ವಿಚಾರಣೆಯ ದಿನಾಂಕವಾದ ಸೆಪ್ಟೆಂಬರ್ 9, 2024ರಂದು ತಮ್ಮ ಕಕ್ಷಿದಾರರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ ಎಂದು ನ್ಯಾಯಾಲಯಕ್ಕೆ ಮುಚ್ಚಳಿಕೆ ಬರೆದು ಕೊಟ್ಟರು.