Jammu & Kashmir ದಲ್ಲಿ ಮೌನ ರೋಧನ | ಕ್ಯಾನ್ಸರ್ ಪ್ರಕರಣಗಳಲ್ಲಿ ಕಳವಳಕಾರಿ ಪ್ರಮಾಣದ ಏರಿಕೆ
ವಹೀದ್ ಪರ್ರಾ | Credit: Facebook/Waheed Parra
ಶ್ರೀನಗರ: ಇತ್ತೀಚಿನ ದಶಕಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸಶಸ್ತ್ರ ಹಿಂಸಾಚಾರದ ಪ್ರಮಾಣ ಅತ್ಯಂತ ಕನಿಷ್ಠ ಮಟ್ಟಕ್ಕೆ ಇಳಿಕೆಯಾಗಿದ್ದರೂ, ಅದಕ್ಕಿಂತಲೂ ಭೀಕರ ಸಮಸ್ಯೆಯೊಂದು ಇದನ್ನು ಹಿಂದಿಕ್ಕಿದೆ. ಅದು ಕ್ಯಾನ್ಸರ್ ಎಂದು ಅಧಿಕೃತ ಆರೋಗ್ಯ ದತ್ತಾಂಶ ಹೇಳುತ್ತದೆ. ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಸಂಬಂಧಿತ ಹಿಂಸಾಚಾರಕ್ಕಿಂತ ಕ್ಯಾನ್ಸರ್ ಕಾರಣಕ್ಕೆ ಸಂಭವಿಸುತ್ತಿರುವ ಸಾವುಗಳ ಪ್ರಮಾಣ ಗಂಭೀರ ಸ್ವರೂಪದಲ್ಲಿ ಏರಿಕೆಯಾಗಿದ್ದು, ಈ ಪ್ರಾಂತ್ಯದ ಮರಣ ಸ್ವರೂಪದಲ್ಲಿ ನಿರ್ಣಾಯಕ ಪಲ್ಲಟವಾಗಿದೆ.
ಈ ವಾರ ಈ ಸಮಸ್ಯೆಯ ಕುರಿತು ಗಮನ ಸೆಳೆದಿರುವ ಪಿಡಿಪಿ ಶಾಸಕ ವಹೀದ್ ಪರ್ರಾ, ದಶಕಗಳ ಹಿಂಸಾಚಾರದಲ್ಲಿ ಸಂಭವಿಸಿರುವ ಸಾವುಗಳು ಹಾಗೂ ಕ್ಯಾನ್ಸರ್ ನಿಂದ ಆಗುತ್ತಿರುವ ಸಾವುಗಳ ಪ್ರಮಾಣವನ್ನು ತೀಕ್ಷ್ಣವಾಗಿ ಹೋಲಿಕೆ ಮಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ವಹೀದ್ ಪರ್ರಾ, “ಕಳೆದ ಐದು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ 67,000 ಮಂದಿ ಕ್ಯಾನ್ಸರ್ ನಿಂದ ಮೃತಪಟ್ಟಿದ್ದರೆ, ಕಳೆದ ಮೂರು ದಶಕಗಳ ಹಿಂಸಾಚಾರದಲ್ಲಿಯೂ ಅಷ್ಟೇ ಪ್ರಮಾಣದ ಜನರು ಸಾವನ್ನಪ್ಪಿದ್ದಾರೆ” ಎಂದು ಹೋಲಿಕೆ ಮಾಡಿದ್ದಾರೆ.
“ದೊಡ್ಡ ಹೋರಾಟಗಳು ಪದೇಪದೇ ನಡೆಯುತ್ತಿವೆ; ಆದರೆ ಅದನ್ನು ನಾವು ಕಾಣುತ್ತಿಲ್ಲ. ಸ್ಥಳೀಯ ಆಸ್ಪತ್ರೆಗಳು ಅತಿಯಾದ ಹೊರೆ ಹಾಗೂ ಸೌಲಭ್ಯಗಳ ಕೊರತೆಯನ್ನು ಎದುರಿಸುತ್ತಿರುವುದರಿಂದ ಜನರು, ವಿಶೇಷವಾಗಿ ಬಡವರು, ಕಾಶ್ಮೀರದ ಹೊರಗೆ ಚಿಕಿತ್ಸೆ ಪಡೆಯಲು ತಮ್ಮ ಜಮೀನುಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದು ಆರೋಗ್ಯ ಮತ್ತು ಆಡಳಿತದ ಸಮಸ್ಯೆಯಾಗಿದ್ದು, ಇದನ್ನು ಉಪೇಕ್ಷಿಸಬಾರದು. ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಯವರು ಹಾಗೂ ಸರ್ಕಾರ ಈ ಸಮಸ್ಯೆಯತ್ತ ಗಮನ ಹರಿಸಬೇಕಾದ ಅಗತ್ಯವಿದೆ” ಎಂದೂ ಅವರು ಮನವಿ ಮಾಡಿದ್ದಾರೆ.
ಅವರು ನೀಡಿರುವ ದತ್ತಾಂಶದಲ್ಲಿ 2024ರಲ್ಲಿ ಕ್ಯಾನ್ಸರ್ ನಿಂದ ತೀರಿಕೊಂಡ ತಮ್ಮ ತಂದೆಯ ನಿದರ್ಶನವೂ ಸೇರಿದೆ.
ಅಧಿಕೃತ ಮರಣ ದತ್ತಾಂಶದ ಪ್ರಕಾರ, ಹಿಂಸಾಚಾರ ಪೀಡಿತ ಜಮ್ಮು ಮತ್ತು ಕಾಶ್ಮೀರದಲ್ಲಿ 1989ರಿಂದ ಇಲ್ಲಿಯವರೆಗೆ 47,000 ಮಂದಿ ಮೃತಪಟ್ಟಿದ್ದಾರೆ. ಈ ಅಂಕಿ-ಸಂಖ್ಯೆಗಳು ಸರ್ಕಾರಿ ಕಚೇರಿಗಳು ಉಲ್ಲೇಖಿಸಿರುವ ಅಧಿಕೃತ ದಾಖಲೆಗಳಲ್ಲಿ ಪ್ರತಿಬಿಂಬಗೊಂಡಿರುವ ಸಂಖ್ಯೆಗಳಾಗಿವೆ. ಇವು ಮೂರೂವರೆ ದಶಕಗಳ ಹಿಂಸಾಚಾರದಲ್ಲಿ ಮೃತಪಟ್ಟಿರುವ ನಾಗರಿಕರು, ಭದ್ರತಾ ಸಿಬ್ಬಂದಿಗಳು ಹಾಗೂ ಉಗ್ರಗಾಮಿಗಳನ್ನು ಒಳಗೊಂಡಿವೆ.
ಆದರೆ ಪ್ರತ್ಯೇಕತಾವಾದಿಗಳ ಪರ ಸಹಾನುಭೂತಿ ಹೊಂದಿರುವವರು ಹಾಗೂ ಕೆಲವು ನಾಗರಿಕ ಸಂಘಟನೆಗಳು ಮಂಡಿಸುವ ಅನಧಿಕೃತ ಅಂದಾಜಿನ ಪ್ರಕಾರ, ಸುಮಾರು ಒಂದು ಲಕ್ಷ ಮಂದಿ ಮೃತಪಟ್ಟಿದ್ದಾರೆ. ಈ ಅಂಕಿ-ಸಂಖ್ಯೆಗಳು ಪ್ರಶ್ನಾರ್ಹವಾಗಿಯೇ ಉಳಿದಿದ್ದು, ಇವುಗಳಿಗೆ ಸಮಗ್ರ ಹಾಗೂ ಪರಿಶೀಲಿಸಬಹುದಾದ ಅಧಿಕೃತ ದತ್ತಾಂಶದ ಬೆಂಬಲವಿಲ್ಲ.
ಆದರೆ ಪ್ರಶ್ನಾತೀತ ಸಂಗತಿಯೆಂದರೆ, ಕಳೆದ ವರ್ಷಗಳಲ್ಲಿ ಹಿಂಸಾಚಾರಕ್ಕೆ ಸಂಬಂಧಿಸಿದ ಮರಣ ಪ್ರಮಾಣ ತೀಕ್ಷ್ಣವಾಗಿ ಇಳಿಕೆಯಾಗಿರುವುದು. ವಾರ್ಷಿಕ ಮರಣ ಪ್ರಮಾಣ ಎರಡಂಕಿಗೆ ಇಳಿದಿದ್ದು, 1990ರ ದಶಕದಿಂದ 2000ರ ದಶಕದವರೆಗೆ ಉತ್ತುಂಗದಲ್ಲಿದ್ದ ಭಯೋತ್ಪಾದನಾ ಅವಧಿಯ ಮರಣ ಪ್ರಮಾಣಕ್ಕೆ ಹೋಲಿಸಿದರೆ ಇದು ಅಲ್ಪವಾಗಿದೆ.
ಇದಕ್ಕೆ ವ್ಯತಿರಿಕ್ತವಾಗಿ, ಕ್ಯಾನ್ಸರ್ ನಿಂದ ಸಂಭವಿಸಿದ ಮರಣ ಪ್ರಮಾಣದಲ್ಲಿ ಏರಿಕೆಯಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ ದತ್ತಾಂಶಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತಿ ವರ್ಷ 12,000ಕ್ಕೂ ಹೆಚ್ಚು ಕ್ಯಾನ್ಸರ್ ಪ್ರಕರಣಗಳು ವರದಿಯಾಗುತ್ತಿವೆ.
2018ರಿಂದ 2022ರ ನಡುವೆ 35,000 ಕ್ಯಾನ್ಸರ್ ಸಂಬಂಧಿತ ಸಾವುಗಳು ಅಧಿಕೃತವಾಗಿ ದಾಖಲಾಗಿವೆ. ಇದರ ಪ್ರಕಾರ, ಪ್ರತಿ ವರ್ಷ ಸರಿಸುಮಾರು 7,000 ಸಾವುಗಳು ಸಂಭವಿಸುತ್ತಿವೆ. ಈ ಅಂಕಿ-ಸಂಖ್ಯೆಗಳು ಇತ್ತೀಚಿನ ವರ್ಷಗಳಲ್ಲಿ ಹಿಂಸಾಚಾರದಿಂದ ಸಂಭವಿಸಿದ ಸಾವುಗಳಿಗೆ ಹೋಲಿಸಿದರೆ ಕ್ಯಾನ್ಸರ್ ಸಂಬಂಧಿತ ಸಾವುಗಳು ಅಧಿಕವಾಗಿವೆ ಎಂಬುದನ್ನು ತೋರಿಸುತ್ತವೆ.
ಜಮ್ಮು ಮತ್ತು ಕಾಶ್ಮೀರವು ದೊಡ್ಡ ಪ್ರಮಾಣದ ಹಿಂಸಾಚಾರದಿಂದ ಮುಕ್ತವಾಗುವತ್ತ ಸಾಗುತ್ತಿದ್ದರೂ, ಕ್ಯಾನ್ಸರ್ ಆರೈಕೆಯನ್ನು ಆದ್ಯತೆಯನ್ನಾಗಿ ಪರಿಗಣಿಸದಿದ್ದರೆ, ಹಲವಾರು ದಶಕಗಳಿಂದ ನಡೆಯುತ್ತಿರುವ ಹಿಂಸಾಚಾರದಿಂದ ಸಾವನ್ನಪ್ಪಿರುವವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈದ್ಯರು ಹಾಗೂ ನೀತಿ ತಜ್ಞರು ಎಚ್ಚರಿಸುತ್ತಾರೆ.
ಸೌಜನ್ಯ: deccanherald.com