×
Ad

ರಾಜಸ್ಥಾನ | ಕುಟುಂಬಸ್ಥರಿಗೆ ತಿಳಿಸದೆ ಮುಸ್ಲಿಂ ಯುವಕನ ಮೃತದೇಹ ದಹನ ಮಾಡಿದ ಪೊಲೀಸರು

Update: 2025-07-31 13:05 IST

ಸಾಂದರ್ಭಿಕ ಚಿತ್ರ

ಜೈಪುರ: ರಾಜಸ್ಥಾನದ ಜೈಪುರದಲ್ಲಿ ಮುಸ್ಲಿಂ ಯುವಕನೋರ್ವನ ಮೃತದೇಹವನ್ನು ಕುಟುಂಬಸ್ಥರ ಗಮನಕ್ಕೆ ತರದೆ ಪೊಲೀಸರು ದಹನ ಮಾಡಿದ್ದಾರೆ. ಘಟನೆ ಜೋಧ್‌ಪುರ ಪೊಲೀಸರ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಜೋಧ್‌ಪುರದ ಗುಲಾಬ್ ಸಾಗರ್‌ನಲ್ಲಿ ಇಸ್ಮಾಯಿಲ್(20) ಅವರ ಮೃತದೇಹವನ್ನು ಕುಟುಂಸ್ಥರಿಗೆ ಹಸ್ತಾಂತರಿಸದೆ ʼವಾರೀಸುದಾರರಿಲ್ಲದ ಮೃತದೇಹʼ ಎಂದು ಪೊಲೀಸರು ದಹನ ಮಾಡಿದ್ದಾರೆ. ಮುಸ್ಲಿಂ ಸಂಪ್ರದಾಯದಂತೆ ಇಸ್ಮಾಯಿಲ್ ಅವರ ಮೃತದೇಹ ಧಪನ ಮಾಡಲು ಅವಕಾಶ ನೀಡಿಲ್ಲ ಎಂದು ಕುಟುಂಬಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಏನಿದು ಘಟನೆ?:

ಜೋಧ್‌ಪುರದ ಚಿಮನ್ಪುರ ಗಲಿ-4ರ ನಿವಾಸಿ ಇಸ್ಮಾಯಿಲ್ ಜೂನ್ 17ರಂದು ನಾಪತ್ತೆಯಾಗಿದ್ದರು. ಅವರ ಕುಟುಂಬ ಜೂನ್ 20ರಂದು ಸದರ್ ಬಝಾರ್ ಪೊಲೀಸ್ ಠಾಣೆಗೆ ನಾಪತ್ತೆ ಬಗ್ಗೆ ದೂರು ನೀಡಿತ್ತು. ಇದಾದ ಒಂದು ದಿನದ ನಂತರ ಜೂನ್ 21ರಂದು ಗುಲಾಬ್ ಸಾಗರ್ ಬಳಿ ಯುವಕನೋರ್ವನ ಮೃತದೇಹ ಪತ್ತೆಯಾಗಿತ್ತು. ಮೃತದೇಹವನ್ನು ಸದರ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಮಹಾತ್ಮ ಗಾಂಧಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಜೂನ್ 25ರಂದು ಸದರ್ ಕೊತ್ವಾಲಿ ಪೊಲೀಸರು ಮೃತದೇಹವನ್ನು ವಾರೀಸುದಾರರಿಲ್ಲದ ಮೃತದೇಹ ಎಂದು ದಹನ ಮಾಡಿದ್ದರು.

ಸದರ್ ಬಝಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವಕ ನಾಪತ್ತೆಯಾಗಿರುವ ಬಗ್ಗೆ ಸದರ್ ಕೊತ್ವಾಲಿ ಠಾಣಾ ಪೊಲೀಸರಿಗೆ ತಿಳಿದಿರಲಿಲ್ಲ. ಪೊಲೀಸರ ನಡುವೆ ಸಮನ್ವಯತೆ ಇಲ್ಲದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಜೂನ್ 26ರಂದು ಇಸ್ಮಾಯಿಲ್ ಅವರ ಅತ್ತಿಗೆಗೆ ಜಲಾಶಯದಿಂದ ಮೃತದೇಹವೊಂದು ಪತ್ತೆಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಅದು ಇಸ್ಮಾಯಿಲ್ ಅವರದ್ದಾಗಿರಬಹುದು ಎಂದು ಸಂಶಯದಿಂದ ಅವರು ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದರು. ಬಳಿಕ ಪೊಲೀಸರನ್ನು ಸಂಪರ್ಕಿಸಿ ಡಿಎನ್ಎ ಪರೀಕ್ಷೆ ನಡೆಸಲಾಗಿತ್ತು.

ಜೂನ್ 27ರಂದು ಇಸ್ಮಾಯಿಲ್ ಅವರ ತಾಯಿ ಮಲ್ಕಾ ಅವರು ರಕ್ತದ ಮಾದರಿಯನ್ನು ಒದಗಿಸಿದ್ದರು. ಡಿಎನ್ಎ ಪರೀಕ್ಷೆಯಲ್ಲಿ ಪೊಲೀಸರು ದಹನ ಮಾಡಿರುವ ಮೃತದೇಹ ಇಸ್ಮಾಯಿಲ್ ಅವರದ್ದು ಎನ್ನುವುದು ದೃಢಪಟ್ಟಿತ್ತು.

ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿದ ಕುಟುಂಬ:

ಈ ಘಟನೆ ಇಸ್ಮಾಯಿಲ್ ಅವರ ಕುಟುಂಬಸ್ಥರಿಗೆ ತೀವ್ರ ದುಃಖ ಮತ್ತು ಆಘಾತಕ್ಕೆ ಕಾರಣವಾಗಿದೆ.

ʼನನ್ನ ಮಗನ ಅಂತ್ಯಕ್ರಿಯೆ ಧಾರ್ಮಿಕ ವಿಧಿ ವಿಧಾನಗಳ ಮೂಲಕ ನಡೆದಿಲ್ಲ. ಪೊಲೀಸರ ನಿರ್ಲಕ್ಷ್ಯದಿಂದ ಮಗನನ್ನು ದಹನ ಮಾಡಲಾಗಿದೆ. ಮುಸ್ಲಿಂ ಸಂಪ್ರದಾಯದಂತೆ ದಫನ ಮಾಡಬೇಕಿತ್ತುʼ ಎಂದು ಮಗ ಮೃತಪಟ್ಟ ನೋವಿನಲ್ಲಿರುವ ಮಲ್ಕಾ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಪೊಲೀಸರು ಹೇಳಿದ್ದೇನು?:

ಸದರ್ ಬಝಾರ್ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ನೇಮಿಚಂದ್ ಈ ಕುರಿತು ಪ್ರತಿಕ್ರಿಯಿಸಿ, ಮೃತದೇಹ ಪತ್ತೆಯಾದಾಗ ಕೊಳೆತಿತ್ತು. ಇದರಿಂದಾಗಿ ಮೃತದೇಹದ ಗುರುತಿಸುವಿಕೆ ಕಷ್ಟಕರವಾಗಿತ್ತು. ಆ ಸಮಯದಲ್ಲಿ ಅದನ್ನು ವಾರೀಸುದಾರರಿಲ್ಲದ ಮೃತದೇಹ ಎಂದು ಪರಿಗಣಿಸಲಾಗಿದೆ. ನಾಪತ್ತೆ ಬಗ್ಗೆ ಮಾಹಿತಿ ಬಂದ ಬಳಿಕ ನಾವು ಡಿಎನ್ಎ ಪರೀಕ್ಷೆಗೆ ಮುಂದಾದೆವು ಎಂದು ಹೇಳಿದರು.

ಪೊಲೀಸರ ವಿರುದ್ಧ ಭುಗಿಲೆದ್ದ ಆಕ್ರೋಶ:

ಈ ಘಟನೆ ಬೆನ್ನಲ್ಲೇ ಪೊಲೀಸರ ವಿರುದ್ಧ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಅಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News