ತೀರ್ಪುಗಳು ಸ್ಪಷ್ಟವಾಗಿರಬೇಕು ಮತ್ತು ಎಲ್ಲರಿಗೂ ಅರ್ಥವಾಗುವಂತಿರಬೇಕು: ನ್ಯಾ.ವಿಕ್ರಮನಾಥ
ನ್ಯಾ.ವಿಕ್ರಮನಾಥ | PC : PTI
ಹೊಸದಿಲ್ಲಿ, ನ.8: ನ್ಯಾಯಾಲಯದ ತೀರ್ಪುಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವ ರೀತಿಯಲ್ಲಿ ಬರೆಯುವ ಅಗತ್ಯವನ್ನು ಒತ್ತಿ ಹೇಳಿರುವ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ವಿಕ್ರಮನಾಥ ಅವರು, ನ್ಯಾಯಾಂಗ ತಾರ್ಕಿಕತೆಯಲ್ಲಿ ಸ್ಪಷ್ಟತೆಯು ಸಾರ್ವಜನಿಕರಿಗೆ ಗೌರವದ ಕ್ರಿಯೆಯಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ಸಂಜೆ ಇಲ್ಲಿ ದ್ವಿತೀಯ ಅಶೋಕ ಕುಮಾರ ಸೇನ್ ಸ್ಮಾರಕ ಉಪನ್ಯಾಸವನ್ನು ನೀಡಿದ ಅವರು, ಪ್ರಮುಖ ಸುಧಾರಣೆಗಳಲ್ಲಿ,ವಿಶೇಷವಾಗಿ ಕಾನೂನು ವೃತ್ತಿಯಲ್ಲಿ ವಸಾಹತುಶಾಹಿ ಯುಗದ ಶ್ರೇಣಿಗಳನ್ನು ರದ್ದುಗೊಳಿಸಿದ್ದ ಮತ್ತು ನ್ಯಾಯಾಂಗ ಕ್ಷೇತ್ರವನ್ನು ಏಕೀಕೃತ ವಕೀಲರ ವರ್ಗಕ್ಕೆ ತೆರೆದಿದ್ದ 1961ರ ಅಡ್ವೊಕೇಟ್ಸ್ ಕಾಯ್ದೆಗೆ ಸಂಬಂಧಿಸಿದಂತೆ ಸೇನ್ ಅವರ ಪರಂಪರೆಯನ್ನು ಗುರುತಿಸಿದರು.
ಪ್ರತಿಯೊಬ್ಬರಿಗೂ ಅರ್ಥವಾಗುವ ಸಂವಿಧಾನದಂತೆ ನ್ಯಾಯಾಂಗ ನಿರ್ಧಾರಗಳನ್ನೂ ಸ್ಥಿರ, ಸ್ಪಷ್ಟ ಮತ್ತು ಅರ್ಥವಾಗುವ ರೀತಿಯಲ್ಲಿ ಬರೆಯಬೇಕು ಎಂದು ಹೇಳಿದರು.
ನ್ಯಾ.ನಾಥ್ ಅವರ ಉಪನ್ಯಾಸವು ಸಾರ್ವಜನಿಕ ಜೀವನದಲ್ಲಿ ಓದು ಮತ್ತು ಕಲಿಕೆಯ ಮಹತ್ವಕ್ಕೂ ಒತ್ತು ನೀಡಿತ್ತು. ಗ್ರಂಥಾಲಯವನ್ನು ಭವಿಷ್ಯದ ಕಾರ್ಯಾಗಾರ ಎಂದು ಬಣ್ಣಿಸಿದ ಅವರು, ವ್ಯಾಪಕ ಓದು ಕಾನೂನು ನಿರೂಪಕರು, ವಕೀಲರು ಮತ್ತು ನ್ಯಾಯಾಧೀಶರನ್ನು ನ್ಯಾಯಯುತ ಮತ್ತು ಚಿಂತನಶೀಲ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಗತ್ಯವಾದ ನಮ್ರತೆ, ತಾಳ್ಮೆ ಮತ್ತು ಉದಾರತೆಯೊಂದಿಗೆ ಸಜ್ಜುಗೊಳಿಸುತ್ತದೆ ಎಂದು ಹೇಳಿದರು. ರವೀಂದ್ರನಾಥ ಟಾಗೋರ್ ಅವರನ್ನು ಉಲ್ಲೇಖಿಸಿದ ಅವರು, ಸಂಸ್ಥೆಗಳು ನಿನ್ನೆಯ ಚೌಕಟ್ಟಿಗೆ ಸೀಮಿತರಾಗದೆ ತಂತ್ರಜ್ಞಾನ, ಭಾಷಣ, ಗುರುತು ಮತ್ತು ಘನತೆಯ ಕುರಿತು ಹೊಸ ಪೀಳಿಗೆಯ ಪ್ರಶ್ನೆಗಳಿಗೆ ಉತ್ತರಿಸಲು ಸನ್ನದ್ಧವಾಗಿರಬೇಕು ಎಂದು ಹೇಳಿದರು.
ವಿಶೇಷವಾಗಿ ಯುವ ವಕೀಲರನ್ನು ಉದ್ದೇಶಿಸಿ ಮಾತನಾಡಿದ ನ್ಯಾ.ನಾಥ್, ಸಮಯಪಾಲನೆ, ಗೌರವ, ನೇರ ಭಾಷೆ ಮತ್ತು ತಪ್ಪುಗಳಿಂದ ಕಲಿಯುವ ಮನೋಭಾವದಂತಹ ಸಣ್ಣಪುಟ್ಟ ವೃತ್ತಿಪರ ಅಭ್ಯಾಸಗಳ ಮೌಲ್ಯವನ್ನು ಎತ್ತಿ ತೋರಿಸಿದರು. ಇಂತಹ ಸಣ್ಣಪುಟ್ಟ ಅಭ್ಯಾಸಗಳು ವರ್ಷಗಳಲ್ಲಿ ಪುನರಾವರ್ತನೆಗೊಂಡಾಗ ವ್ಯಕ್ತಿತ್ವವನ್ನು ರೂಪಿಸುತ್ತವೆ ಎಂದು ಹೇಳಿದರು.
ಭಾರತದ ಕಾನೂನು ವ್ಯವಸ್ಥೆಯು ಕೃತಕ ಬುದ್ಧಿಮತ್ತೆ, ಡಿಜಿಟಲ್ ಹಕ್ಕುಗಳು, ಆರ್ಥಿಕ ನ್ಯಾಯಸಮ್ಮತತೆ ಮತ್ತು ಪರಿಸರ ರಕ್ಷಣೆ ಜವಾಬ್ದಾರಿಯನ್ನೊಳಗೊಂಡ ಹೊಸ ಪ್ರಶ್ನೆಗಳನ್ನು ಎದುರಿಸುತ್ತಿರುವಾಗ ಸೇನ್ ಪ್ರತಿನಿಧಿಸಿದ್ದ ನೈತಿಕ ಧೋರಣೆ ಈಗಲೂ ಪ್ರಮುಖವಾಗಿದೆ:‘ನಿಮ್ಮ ಪ್ರಭಾವವನ್ನು ಸಂಸ್ಥೆಗಳನ್ನು ನಿರ್ಮಿಸಲು ಬಳಸಿ,ಕೇವಲ ಖ್ಯಾತಿಗಲ್ಲ. ನಿಮ್ಮ ಕೌಶಲ್ಯವನ್ನು ನ್ಯಾಯವನ್ನು ನಿಖರಗೊಳಿಸಲು ಬಳಸಿ, ಕೇವಲ ವಾದಗಳಿಗಾಗಿ ಅಲ್ಲ’ ಎಂದು ನ್ಯಾ.ನಾಥ್ ಹೇಳಿದರು.