ತೆಲಂಗಾಣ| ಹೊಸ ಪಕ್ಷ ಸ್ಥಾಪನೆಗೆ ಮುಂದಾದ ಕೆ.ಕವಿತಾ: ಪ್ರಶಾಂತ್ ಕಿಶೋರ್ ಜೊತೆ ಮಾತುಕತೆ
Photo Credit ; PTI
ಹೈದರಾಬಾದ್,ಜ.19: ‘ತೆಲಂಗಾಣ ಜಾಗೃತಿ ’ ಹೆಸರಿನಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸಲು ಮುಂದಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯೆ ಕೆ.ಕವಿತಾ ಅದಕ್ಕಾಗಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಕವಿತಾ ಸಾಂಸ್ಕೃತಿಕ ಸಂಘಟನೆಯಾಗಿರುವ ತೆಲಂಗಾಣ ಜಾಗೃತಿಯ ಅಧ್ಯಕ್ಷೆಯಾಗಿದ್ದಾರೆ.
ಪ್ರಶಾಂತ್ ಕಿಶೋರ್ ಇತ್ತೀಚಿಗೆ ಹೈದರಾಬಾದ್‌ಗೆ ಐದು ದಿನಗಳ ಭೇಟಿ ನೀಡಿದ್ದ ಸಂದರ್ಭದಲ್ಲಿ ಕವಿತಾ ಅವರೊಂದಿಗೆ ಮಾತುಕತೆಗಳನ್ನು ನಡೆಸಿದ್ದಾರೆ. ತನ್ನ ಹೊಸ ಪಕ್ಷದ ಸ್ಥಾಪನೆ, ತೆಲಂಗಾಣದಲ್ಲಿ ಅದಕ್ಕೆ ರಾಜಕೀಯ ನೆಲೆ ಮತ್ತು ಇತರ ಸಂಬಂಧಿತ ವಿಷಯಗಳ ಬಗ್ಗೆ ಅವರು ಚರ್ಚಿಸಿದ್ದಾರೆ ಎಂದೂ ಮೂಲಗಳು ತಿಳಿಸಿವೆ.
ಬಿಆರ್‌ಎಸ್ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾರನ್ನು ಸೆಪ್ಟಂಬರ್ 2025ರಲ್ಲಿ ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.
ತನ್ನ ಅಮಾನತಿನ ಬೆನ್ನಲ್ಲೇ ಕವಿತಾ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಪರಿಷತ್‌ನ ಸಭಾಪತಿ ಗುಖಾ ಸುಖೇಂದ್ರ ರೆಡ್ಡಿ ಅವರು ಈ ತಿಂಗಳ ಆರಂಭದಲ್ಲಿ ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ.