ಕಮಲ್ ನಾಥ್ ಪದಚ್ಯುತಿ; ಜಿತು ಪಟ್ವಾರಿ ನೂತನ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ
ಹೊಸದಿಲ್ಲಿ: ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ, ಕಾಂಗ್ರೆಸ್ ವರಿಷ್ಠರು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರನ್ನು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿ ಆ ಹುದ್ದೆಗೆ ಹಿಂದುಳಿದ ವರ್ಗಗಳ ನಾಯಕ ಜಿತು ಪಟ್ವಾರಿ ಅವರನ್ನು ನೇಮಕ ಮಾಡಿದೆ.
ಮಧ್ಯಪ್ರದೇಶದ ಒಟ್ಟು ಮತದಾರರಲ್ಲಿ ಶೇಕಡ 50ರಷ್ಟು ಇತರ ಹಿಂದುಳಿದ ವರ್ಗಗಳ ಮತದಾರರಿದ್ದು, ಪಟ್ವಾರಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ಧ ರಾವು ವಿಧಾನಸಭಾ ಕ್ಷೇತ್ರದಲ್ಲಿ 35 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದ್ದರು. ಈ ಬದಲಾವಣೆ ಮೂಲಕ ಮಹತ್ವದ ಲೋಕಸಭಾ ಚುನಾವಣೆಯಲ್ಲಿ ಈ ಪ್ರಮುಖ ರಾಜ್ಯದಲ್ಲಿ ಹೊಸ ಆರಂಭಕ್ಕೆ ಮುಂದಾಗಿದೆ.
ಪಟ್ವಾರಿ ನೇಮಕದ ಬಳಿಕ 77 ವರ್ಷ ವಯಸ್ಸಿನ ಕಮಲ್ನಾಥ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಹಲವು ಊಹಾಪೋಹಗಳು ಎದ್ದಿವೆ. ಕೇಂದ್ರ ಸಚಿವರಾಗಿ, ಒಂಬತ್ತು ಬಾರಿ ಸಂಸದರಾಗಿ, 15 ತಿಂಗಳ ಅವಧಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಇವರು ಸೇವೆ ಸಲ್ಲಿಸಿದ್ದರು. 5 ವರ್ಷಕ್ಕೂ ಹೆಚ್ಚುಕಾಲ ಎಂಪಿಸಿಸಿ ಅಧ್ಯಕ್ಷರಾಗಿದ್ದ ಅವರು 2020ರಲ್ಲಿ ಹಿರಿಯ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯಾ ಅವರ ಬಂಡಾಯದ ಬಳಿಕ 2020ರಲ್ಲಿ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು.
ನವೆಂಬರ್ 17ರಂದು ನಡೆದ ವಿಧಾನಸಭಾ ಚುನಾವಣೆಯಲ್ಲಿ 230 ಸದಸ್ಯಬಲದ ಸದನದಲ್ಲಿ ಬಿಜೆಪಿ 163 ಸ್ಥಾನಗಳನ್ನು ಗಳಿಸಿಅಧಿಕಾರಕ್ಕೆ ಬಂದರೆ ಕಾಂಗ್ರೆಸ್ ಕೇವಲ 66 ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಆದರೆ ಪಕ್ಕದ ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಪಕ್ಷ ಸೋಲು ಅನುಭವಿಸಿದರೂ, ದೀಪಕ್ ಜೈಜ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮುಂದುವರಿಸಿದೆ.