×
Ad

ಕರೂರ್ ಕಾಲ್ತುಳಿತ : ಟಿವಿಕೆ ಪಕ್ಷದ 3 ಮಂದಿಯ ವಿರುದ್ಧ ಎಫ್ಐಆರ್, ಒಬ್ಬನ ಬಂಧನ

Update: 2025-09-30 08:44 IST

Photo credit: PTI

ಕರೂರ್: ಮೂರು ದಿನಗಳ ಹಿಂದೆ 41 ಮಂದಿಯ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ತಮಿಳಗ ವೆಟ್ರಿ ಕಳಗಂ ಪಕ್ಷದ ಕರೂರು ಜಿಲ್ಲಾ ಕಾರ್ಯದರ್ಶಿ ಮತಿಯಾಳಗಂ ಅವರನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಎಫ್ಐಆರ್‌ನಲ್ಲಿ ಹೆಸರಿಸಿರುವ ಟಿವಿಕೆ ಪಕ್ಷದ ಮೂವರು ಪ್ರಮುಖ ನಾಯಕರ ಪೈಕಿ ಇವರೂ ಒಬ್ಬರು.

ಪ್ರಧಾನ ಕಾರ್ಯದರ್ಶಿ ಬಸ್ಸಿ ಆನಂದ್, ಜಂಟಿ ಪ್ರಧಾನ ಕಾರ್ಯದರ್ಶಿ ಸಿಟಿಆರ್ ನಿರ್ಮಲ್ ಕುಮಾರ್ ಮತ್ತು ಮತಿಯಾಳಗಂ ಅವರ ಹೆಸರು ಎಫ್ಐಆರ್‌ನಲ್ಲಿ ಇದೆ. ವಿಜಯ್ ರ್ಯಾಲಿಯಲ್ಲಿ ವಿಳಂಬ, ಕೆಟ್ಟ ನಿರ್ವಹಣೆ ಹಾಗೂ ಅರಾಜಕತೆಯಿಂದಾಗಿ ಕಾಲ್ತುಳಿತ ಸಂಭವಿಸಿತ್ತು ಎಂದು ಎಫ್ಐಆರ್‌ನಲ್ಲಿ ದೂರಲಾಗಿದೆ. ಸುಡು ಬಿಸಿಲಿನಲ್ಲಿ ಸುಧೀರ್ಘ ಕಾಲ ಕಾದಿರುವುದು, ನೀರು ಮತ್ತು ವೈದ್ಯಕೀಯ ಸೌಲಭ್ಯದ ಕೊರತೆ ಮತ್ತು ಜನದಟ್ಟಣೆ ಆತಂಕಕ್ಕೆ ಕಾರಣವಾಯಿತು ಎಂದು ಎಫ್ಐಆರ್ ಹೇಳಿದೆ.

ಕರೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಉದ್ದೇಶಪೂರ್ವಕವಾಗಿ ರ‍್ಯಾಲಿ ವಿಳಂಬ ಮಾಡಲಾಗಿದೆ ಎಂದು ಆಪಾದಿಸಲಾಗಿದೆ.

ಮಧ್ಯಾಹ್ನದ ವೇಳೆಗೆ ವಿಜಯ್ ಆಗಮಿಸಲಿದ್ದಾರೆ ಎಂದು ಟಿವಿ ಚಾನಲ್ ಗಳು ಸುತ್ತಿ ಬಿತ್ತರಿಸಿದ್ದವು. ಬೆಳಿಗ್ಗೆ 10 ಗಂಟೆಯಿಂದಲೇ ಜನ ಬರಲು ಆರಂಭಿಸಿದ್ದು, ಸಂಘಟಕರು 10ಸಾವಿರ ಮಂದಿಗೆ ಅನುಮತಿ ಪಡೆದಿದ್ದರು. ಆದರೆ 25 ಸಾವಿರಕ್ಕೂ ಹೆಚ್ಚು ಮಂದಿ ಬಂದಿದ್ದರು.

500 ಮಂದಿ ಪೊಲೀಸರನ್ನು ನಿಯೋಜಿಸಲಾಗಿತ್ತು. ವಿಜಯ್ ಅವರು ವೇಲಾಯುಧನ್ ಪಾಳ್ಯಂ ಮತ್ತು ತವಿಟ್ಟುಪಾಳ್ಯಂ ಮಾರ್ಗವಾಗಿ 4.45ಕ್ಕೆ ಕರೂರ್ ತಲುಪಿದ್ದರು. ಅನುಮತಿ ಇಲ್ಲದೇ ರೋಡ್‌ಶೋ ನಡೆದಿದ್ದು, ಜನರ ಮಧ್ಯೆಯೇ ತಮ್ಮ ವಾಹನವನ್ನು ನಿಲ್ಲಿಸಿದ್ದು, ದಟ್ಟಣೆ ಮತ್ತಷ್ಟು ಹೆಚ್ಚಲು ಕಾರಣವಾಯಿತು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News