ಕಾಂಗ್ರೆಸ್ ಗೆ ಕೌಸ್ತವ್ ಬಾಗ್ಚಿ ರಾಜೀನಾಮೆ
Update: 2024-02-28 22:05 IST
ಕೌಸ್ತವ್ ಬಾಗ್ಚಿ | Photo: PTI
ಕೋಲ್ಕತಾ : ಪಶ್ಚಿಮಬಂಗಾಳದ ಕಾಂಗ್ರೆಸ್ ನಾಯಕ ಕೌಸ್ತವ್ ಬಾಗ್ಚಿ ಬುಧವಾರ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ತನಗೆ ಗೌರವ ಸಿಗುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ನ ರಾಷ್ಟ್ರಾಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಕಳುಹಿಸಿದ್ದಾರೆ. ಅದರ ಪ್ರತಿಯನ್ನು ಪಕ್ಷದ ರಾಜ್ಯಾಧ್ಯಕ್ಷ ಅಧೀರ್ ರಂಜನ್ ಚೌಧುರಿ ಹಾಗೂ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ಗುಲಾಂ ಅಹ್ಮದ್ ಮಿರ್ ಅವರಿಗೆ ರವಾನಿಸಿದ್ದಾರೆ.
ತನ್ನ ರಾಜೀನಾಮೆ ಕುರಿತು ಬಾಗ್ಚಿ, ‘‘ಬಹುಶಃ ಈಗ ಜನರು ನನ್ನನ್ನು ಪಕ್ಷ ವಿರೋಧಿ ಎಂದು ಕರೆಯುಬಹುದು. ಆದರೆ, ನಾನು ಒಂದು ವಿಚಾರವನ್ನು ಮತ್ತೆ ಮತ್ತೆ ಹೇಳಲು ಬಯಸುತ್ತೇನೆ. ಅದೇನೆಂದರೆ, ನಾನು ಭ್ರಷ್ಟ ಟಿಎಂಸಿ ಜೊತೆ ಕಾಂಗ್ರೆಸ್ ಸೇರುವುದನ್ನು ವಿರೋಧಿಸುತ್ತೇನೆ’’ ಎಂದಿದ್ದಾರೆ.
ಕಾಂಗ್ರೆಸ್ ಹಾಗೂ ಟಿಎಂಸಿ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಭಾಗವಾಗಿವೆ.