ಕೇರಳ | ಹಿನ್ನೀರಿನಲ್ಲಿ ತೇಲುವ ಟೀ ಅಂಗಡಿಯಲ್ಲಿ ಮಸಾಲಾ ಚಹಾ ಮಾರುವ ‘ಚಾಯಾ ಚೇಚಿ’
Photo: Instagram/@ranavat)
ಕೊಟ್ಟಾಯಂ,ನ.10: ಕೇರಳದ ಕೊಟ್ಟಾಯಮ್ ನಿಂದ 13 ಕಿ.ಮೀ.ದೂರದ ಕುಮಾರಕೋಮ್ ಎಂಬಲ್ಲಿಯ ಹಿನ್ನೀರಿನಲ್ಲಿ ತೇಲುವ ತನ್ನ ದೋಣಿಯಲ್ಲಿ ಮಸಾಲಾ ಚಾಯ್ ಮಾರಾಟ ಮಾಡುತ್ತಿರುವ,‘ಚಾಯಾ ಚೇಚಿ’ ಎಂದೇ ಹೆಸರಾಗಿರುವ ಹಿರಿಯ ಮಹಿಳೆಯ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಅವರ ಬಗ್ಗೆ ಪ್ರೀತಿಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.
ರಣಾವತ್ ಎಂಬ ಬಳಕೆದಾರರು ಇತ್ತೀಚಿಗೆ ಇನ್‌ಸ್ಟಾಗ್ರಾಮ್ ನಲ್ಲಿ ‘ಚಾಯಾ ಚೇಚಿ’ ತನ್ನ ದೋಣಿಯಲ್ಲಿ ಚಹಾ ತಯಾರಿಸುವುದನ್ನು ಮತ್ತು ಗ್ರಾಹಕರಿಗೆ ನೀಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ.
‘‘ಕೇರಳದ ಹಿನ್ನೀರಿನಲ್ಲಿ ಸ್ಥಳೀಯ ಲೆಜೆಂಡ್ ಆಗಿರುವ ‘ಚಾಯಾ ಚೇಚಿ’ ಮತ್ತು ಅವರ ಟೀ ಅಂಗಡಿಗೆ ಭೇಟಿ ನೀಡಿ. ತನ್ನ ಮಸಾಲೆಯುಕ್ತ ಚಹಾ, ಆಕರ್ಷಕ ನಗು ಮತ್ತು ಆತ್ಮೀಯ ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಅವರು ವರ್ಷಗಳಿಂದಲೂ ತನ್ನ ಪುಟ್ಟ ಮರದ ದೋಣಿಯಲ್ಲಿ ಚಹಾ ನೀಡುತ್ತಿದ್ದಾರೆ’’ ಎಂಬ ಅಡಿಬರಹವನ್ನು ವೀಡಿಯೊಕ್ಕೆ ನೀಡಲಾಗಿದೆ.
ವೀಡಿಯೊ ಪೋಸ್ಟ್ ಆದಾಗಿನಿಂದ ಐದು ಲಕ್ಷಕ್ಕೂ ಹೆಚ್ಚಿನ ಕಮೆಂಟ್ ಗಳು ಹರಿದು ಬಂದಿವೆ.
‘ಎಂತಹ ಸಂತಸಕರ ಅನುಭವ’ ಎಂದು ಓರ್ವ ಬಳಕೆದಾರರು ಹೇಳಿದ್ದರೆ, ‘ನಾನು ಕಾಫಿ ಪ್ರೇಮಿ,ಆದರೆ ನಾನು ಭಾರತಕ್ಕೆ ಭೇಟಿ ನೀಡಿದಾಗೆಲ್ಲ ಚಾಯ್ ನನ್ನ ಕಾಫಿ ಪ್ರೇಮವನ್ನು ಮರೆಸುತ್ತದೆ’ ಎಂದು ಇನ್ನೋರ್ವರು ಬರೆದಿದ್ದಾರೆ.
ಕನಸುಗಳು ಹೀಗೆಯೇ ರೂಪುಗೊಳ್ಳುತ್ತವೆ ಎಂದು ಮಗದೊಬ್ಬರು ಬಣ್ಣಿಸಿದ್ದಾರೆ. ‘ಓ ದೇವರೇ...ಎಂತಹ ಕನಸಿದು’ ಎಂದು ಇನ್ನೋರ್ವರು ಉದ್ಗರಿಸಿದ್ದಾರೆ.
‘ಈ ಚಾಯ್ ಸ್ಟಾರ್‌ಬಕ್ಸ್ ನ್ನೂ ಮೀರಿಸುತ್ತದೆ. ಇದರ ಬಗ್ಗೆ ಯಾವಾಗಲೂ ಏನಾದರೂ ವಿಶೇಷವಿರುತ್ತದೆ, ಹೊಳೆಯುವ ರಾಣಿಯಂತೆ’ ಎಂದು ಇನ್ನೋರ್ವ ಬಳಕೆದಾರರು ಬರೆದಿದ್ದಾರೆ.