‘ಬೀಡಿ-ಬಿಹಾರ’ ವಿವಾದ: ಕೇರಳ ಕಾಂಗ್ರೆಸ್ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ರಾಜೀನಾಮೆ
PC | thenewsminute
ಹೊಸದಿಲ್ಲಿ: ದೇಶಾದ್ಯಂತ ರಾಜಕೀಯ ನಾಯಕರಿಂದ ತೀವ್ರ ಟೀಕೆಗೊಳಗಾದ ‘ಬೀಡಿ-ಬಿಹಾರ’ ವಿವಾದಾತ್ಮಕ ಸಾಮಾಜಿಕ ಮಾಧ್ಯಮ ಪೋಸ್ಟ್ ಕಾರಣಕ್ಕೆ ಕೇರಳ ಕಾಂಗ್ರೆಸ್ ನ ಸಾಮಾಜಿಕ ಮಾಧ್ಯಮ ಮುಖ್ಯಸ್ಥರಾದ ವಿ.ಟಿ.ಬಲರಾಂ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಜಿಎಸ್ಟಿ ಹಂತಗಳು ಬದಲಾವಣೆಯಾದ ಹಿನ್ನೆಲೆಯಲ್ಲಿ ಬೀಡಿಯೊಂದಿಗೆ ಬಿಹಾರವನ್ನು ಹೋಲಿಸಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ ಪೋಸ್ಟ್ ಮಾಡಿತ್ತು. ಇದರ ಬೆನ್ನಿಗೇ, ದೇಶಾದ್ಯಂತ ಈ ಪೋಸ್ಟ್ ವಿವಾದಕ್ಕೆ ಗುರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಎರಡು ಬಾರಿಯ ಶಾಸಕ ಹಾಗೂ ಇಲ್ಲಿಯವರೆಗೆ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ಹಾಗೂ ಡಿಜಿಟಲ್ ಘಟಕದ ಮುಖ್ಯಸ್ಥರಾಗಿದ್ದ ವಿ.ಟಿ.ಬಲರಾಂ ತಮ್ಮ ಹುದ್ದೆಯಿಂದ ಕೆಳಕ್ಕಿಳಿದಿದ್ದಾರೆ.
ಸದ್ಯ ಅಳಿಸಿ ಹಾಕಲಾಗಿರುವ ಎಕ್ಸ್ ಪೋಸ್ಟ್ ನಲ್ಲಿ “ಬೀಡಿಗಳು ಹಾಗೂ ಬಿಹಾರ ಬಿ ಅಕ್ಷರದಿಂದ ಪ್ರಾರಂಭಗೊಳ್ಳುತ್ತವೆ. ಅವನ್ನು ಇನ್ನು ಮುಂದೆ ಪಾಪ ಎಂದು ಪರಿಗಣಿಸುವಂತಿಲ್ಲ” ಎಂದು ಬರೆಯಲಾಗಿತ್ತು. ಬೀಡಿಗಳ ಮೇಲಿನ ಜಿಎಸ್ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಕೆ ಮಾಡಿದ ಜಿಎಸ್ಟಿ ಮಂಡಳಿಯ ನಿರ್ಧಾರಕ್ಕೆ ಸಂಬಂಧಿಸಿದಂತೆ ಈ ಪೋಸ್ಟ್ ಅನ್ನು ವ್ಯಂಗ್ಯಭರಿತವಾಗಿ ಮಾಡಲಾಗಿತ್ತು.
ಈ ಪೋಸ್ಟ್ ವಿರುದ್ಧ ಬಿಹಾರದಲ್ಲಿ ಪಕ್ಷಾತೀತವಾಗಿ ಖಂಡನೆ ವ್ಯಕ್ತವಾಗಿತ್ತು. ಬಿಹಾರ ವಿಧಾನಸಭಾ ಚುನಾವಣೆಗೆ ಇನ್ನು ಎರಡು ತಿಂಗಳು ಮಾತ್ರ ಇರುವಾಗ ಕೇರಳ ಕಾಂಗ್ರೆಸ್ ಮಾಡಿದ್ದ ಈ ಪೋಸ್ಟ್ ಆರ್ಜೆಡಿ-ಕಾಂಗ್ರೆಸ್ ಮೈತ್ರಿಕೂಟಕ್ಕೆ ಇರಸುಮುರಸನ್ನುಂಟು ಮಾಡಿತ್ತು. ಇದರ ಬೆನ್ನಿಗೇ, ಕೇರಳ ಕಾಂಗ್ರೆಸ್ ಘಟಕದ ಸಾಮಾಜಿಕ ಮಾಧ್ಯಮ ಮುಖ್ಯಸ್ಥ ವಿ.ಟಿ.ಬಲರಾಂ ತಮ್ಮ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.