×
Ad

ಬಿರಿಯಾನಿ, ಚಿಕನ್ ಫ್ರೈಗೆ ಮನವಿ ಮಾಡಿದ ಮಗು; ವಿಡಿಯೋ ವೈರಲ್‌ ಬಳಿಕ ಅಂಗನವಾಡಿ ಮೆನು ಬದಲಾವಣೆಗೆ ಮುಂದಾದ ಕೇರಳ ಸರಕಾರ!

Update: 2025-02-04 11:43 IST

Screengrab: facebook/Veena George

ತಿರುವನಂತಪುರಂ: ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ವಿನಂತಿಸುವ ಮಗುವಿನ ವೀಡಿಯೋ ವೈರಲ್ ಆದ ನಂತರ ಕೇರಳದ ಮಕ್ಕಳ ಆರೈಕೆ ಕೇಂದ್ರಗಳಲ್ಲಿ ಸರಕಾರವು ಮೆನುವಿನಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿದೆ.

ವೈರಲ್ ಆಗಿರುವ ವೀಡಿಯೊದಲ್ಲಿ, ಕ್ಯಾಪ್ ಧರಿಸಿದ ಮಗು ತನ್ನ ತಾಯಿಯೊಂದಿಗೆ ಮುಗ್ಧವಾಗಿ, "ನನಗೆ ಉಪ್ಮಾ ಬದಲಿಗೆ ಅಂಗನವಾಡಿಯಲ್ಲಿ ಬಿರಿಯಾನಿ ಮತ್ತು ಪೊರಿಚ ಕೋಳಿ' (ಚಿಕನ್ ಫ್ರೈ) ಬೇಕು" ಎಂದು ಕೇಳುತ್ತಿರುವುದು ಕೇಳಿಬಂದಿದೆ. ಮನೆಯಲ್ಲಿ ಬಿರಿಯಾನಿ ತಿನ್ನುವಾಗ ಮಗು ವಿನಂತಿಸಿದಾಗ ವೀಡಿಯೊವನ್ನು ಚಿತ್ರೀಕರಿಸಿದ ತಾಯಿ, ನಂತರ ಅದನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ಬಳಿಕ ಅದು ವೈರಲ್ ಆಗಿತ್ತು.

ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ವೀಣಾ ಜಾರ್ಜ್ ಸೋಮವಾರ ತಮ್ಮ ಫೇಸ್‌ಬುಕ್ ಪುಟದಲ್ಲಿ ಶಂಕು ಎಂಬ ಮಗು ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ವಿನಂತಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅಂಗನವಾಡಿಯ ಮೆನುವನ್ನು ಪರಿಷ್ಕರಿಸಲಾಗುವುದು ಎಂದು ಹೇಳಿದ್ದಾರೆ.

ಮಗು ಮುಗ್ಧವಾಗಿ ವಿನಂತಿಸಿದೆ. ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಶಂಕು, ಅವರ ತಾಯಿ ಮತ್ತು ಅಂಗನವಾಡಿ ಸಿಬ್ಬಂದಿಗೆ ಶುಭಾಶಯಗಳನ್ನು ಕಳುಹಿಸಿದ ಸಚಿವೆ ವೀಣಾ ಜಾರ್ಜ್, "ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಖಚಿತಪಡಿಸಿಕೊಳ್ಳಲು ಅಂಗನವಾಡಿಗಳ ಮೂಲಕ ವಿವಿಧ ರೀತಿಯ ಆಹಾರವನ್ನು ಒದಗಿಸಲಾಗುತ್ತದೆ. ಶಂಕುವಿನ ಸಲಹೆಯನ್ನು ಗಣನೆಗೆ ತೆಗೆದುಕೊಂಡು ಮೆನುವನ್ನು ಪರಿಶೀಲಿಸಲಾಗುವುದು" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಸರ್ಕಾರವು ಅಂಗನವಾಡಿಗಳ ಮೂಲಕ ಮಕ್ಕಳಿಗೆ ಮೊಟ್ಟೆ ಮತ್ತು ಹಾಲು ಒದಗಿಸುವ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತಂದಿದೆ. ಸ್ಥಳೀಯ ಸಂಸ್ಥೆಗಳು ಅಂಗನವಾಡಿಗಳಲ್ಲಿ ವಿವಿಧ ರೀತಿಯ ಆಹಾರಗಳನ್ನು ಒದಗಿಸುತ್ತವೆ" ಎಂದು ಸಚಿವರು ಹೇಳಿದ್ದಾರೆ.

"ವಿಡಿಯೋ ನೋಡಿದ ನಂತರ, ಶಂಕುಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುತ್ತೇವೆ ಎಂದು ಕೆಲವು ಜನರಿಂದ ನಮಗೆ ಕರೆಗಳು ಬಂದವು" ಎಂದು ವೀಣಾ ಜಾರ್ಜ್ ಅವರು ಸುದ್ದಿ ವಾಹಿನಿಯೊಂದಕ್ಕೆ ತಿಳಿಸಿದರು.

ಸಾಮಾಜಿಕ ಜಾಲತಾಣ ಬಳಕೆದಾರರು ಮಗುವಿನ ವಿನಂತಿಗೆ ಬೆಂಬಲ ನೀಡಿದ್ದಾರೆ. ಸರ್ಕಾರವು ಜೈಲುಗಳಲ್ಲಿ ಅಪರಾಧಿಗಳಿಗೆ ನೀಡಲಾಗುವ ಆಹಾರವನ್ನು ಕಡಿಮೆ ಮಾಡಿ ಅಂಗನವಾಡಿಗಳ ಮೂಲಕ ಮಕ್ಕಳಿಗೆ ಉತ್ತಮ ಊಟವನ್ನು ನೀಡಬೇಕು ಎಂದು ಕೆಲವರು ಸಲಹೆ ನೀಡಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News