ಕೇರಳ | ಮೆದುಳಿನ ಸೋಂಕಿಗೆ ಮತ್ತಿಬ್ಬರು ಬಲಿ
ಕಲುಷಿತ ನೀರಿನಲ್ಲಿ ಈಜಿದರೆ, ಸ್ನಾನ ಮಾಡಿದರೆ ಅಪಾಯ
ಸಾಂದರ್ಭಿಕ ಚಿತ್ರ |PC : Indiatoday.in
ಕೋಝಿಕ್ಕೋಡ್, ಸೆ. 1: ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ತಿಂಗಳ ಮಗು ಸೇರಿದಂತೆ ಇಬ್ಬರು ಅಪರೂಪದ ಹಾಗೂ ಮಾರಕ ಮೆದುಳಿನ ಸೋಂಕು ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನಿಂದ ಮೃತಪಟ್ಟಿದ್ದಾರೆ.
ಇದರೊಂದಿಗೆ ಆಗಸ್ಟ್ ನ ಒಳಗೆ ರಾಜ್ಯದಲ್ಲಿ ಮೆದುಳಿನ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಮೃತಪಟ್ಟ ಮಗು ಜಿಲ್ಲೆಯ ಒಮಾಸರಿಯ ಅಬೂಬಕ್ಕರ್ ಸಿದ್ದೀಕ್ ಅವರ ಪುತ್ರ. ಈ ಮಗು ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿತ್ತು. ರವಿವಾರ ಮಗುವಿನ ಆರೋಗ್ಯ ಸ್ಥಿತಿ ಹದಗೆಟ್ಟಿತು. ಅನಂತರ ತೀವ್ರ ನಿಗಾ ಘಟಕದಲ್ಲಿ ಮೃತಪಟ್ಟಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತಪಟ್ಟ ಇನ್ನೊಬ್ಬರು ಮಲಪ್ಪುರಂ ಜಿಲ್ಲೆಯ ಕಪ್ಪಿಲ್‌ನ ರಮ್ಲಾ (52). ಇವರಿಗೆ ಜುಲೈ 8ರಂದು ಮೆದುಳು ಸೋಂಕಿನ ಲಕ್ಷಣ ಕಂಡು ಬಂದಿತ್ತು. ಆರಂಭದಲ್ಲಿ ಇವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆರೋಗ್ಯ ಸ್ಥಿತಿ ಹದಗೆಟ್ಟಿರುವುದರಿಂದ ಅನಂತರ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಕೋಝಿಕ್ಕೋಡ್, ಮಲಪ್ಪುರಂ ಹಾಗೂ ವಯನಾಡ್ ಜಿಲ್ಲೆಗಳ ಇತರ 8 ರೋಗಿಗಳು ಈ ಆಸ್ಪತ್ರೆಯಲ್ಲಿ ಪ್ರಸ್ತುತ ಮೆದುಳು ಸೋಂಕಿಗೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಹಿಂದೆ ಈ ಆಸ್ಪತ್ರೆಯಲ್ಲಿ ಇದೇ ಸೋಂಕಿನಿಂದ ತಲಮಶ್ಶೇರಿಯ 9 ವರ್ಷದ ಬಾಲಕಿ ಮೃತಪಟ್ಟಿದ್ದಳು.
ಕಲುಷಿತ ನೀರಿನಲ್ಲಿ ಈಜು ಹಾಗೂ ಸ್ನಾನ ಮಾಡುವುದರಿಂದ ಅಮೀಬಿಕ್ ಮೆನಿಂಗೊಎನ್ಸೆಫಾಲಿಟಿಸ್‌ನ ಸೋಂಕು ಉಂಟಾಗುತ್ತದೆ. ಕೇರಳದಲ್ಲಿ ಈ ವರ್ಷ ಒಟ್ಟು 42 ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯಾಧಿಕಾರಿ ತಿಳಿಸಿದ್ದಾರೆ.