ಮುಂಬೈ | ಅಪಹೃತ ಬಿಲ್ಡರ್ ಪುನರ್ವಸತಿ ಕೇಂದ್ರದಲ್ಲಿ ಪತ್ತೆ: ಮೊದಲ ಪತ್ನಿಯಿಂದ ಬಲವಂತವಾಗಿ ಸೇರ್ಪಡೆ!
ಸಾಂದರ್ಭಿಕ ಚಿತ್ರ
ಮುಂಬೈ: ತಮ್ಮ ನಿವಾಸದಿಂದ ಅಪಹರಣಕ್ಕೀಡಾಗಿದ್ದ ಮುಂಬೈ ಮೂಲದ ಬಿಲ್ಡರ್ ಒಬ್ಬರು ನೆರೆಯ ಪಾಲ್ಘರ್ ಜಿಲ್ಲೆಯಲ್ಲಿನ ಪುನರ್ವಸತಿ ಕೇಂದ್ರದಲ್ಲಿ ಪತ್ತೆಯಾಗಿದ್ದು, ಅವರ ಮೊದಲ ಪತ್ನಿಯ ಆದೇಶದ ಮೇರೆಗೆ ಅವರನ್ನು ಪುನರ್ವಸತಿ ಕೇಂದ್ರಕ್ಕೆ ದಾಖಲಿಸಲಾಗಿತ್ತು ಎಂದು ಮಂಗಳವಾರ ಪೊಲೀಸರು ತಿಳಿಸಿದ್ದಾರೆ.
ರವಿವಾರ ರಾತ್ರಿ ಫೋರ್ ಬಂಗ್ಲೋಸ್ ಪ್ರದೇಶದಲ್ಲಿನ ತಮ್ಮ ನಿವಾಸದಿಂದ ಚಂದ್ರಕಾಂತ್ ಭಾನು ಅವರನ್ನು ಕೆಲವು ಅಪರಿಚಿತ ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ವೆರ್ಸೋವಾ ಠಾಣೆ ಪೊಲೀಸರಿಗೆ ದೂರು ನೀಡಲಾಗಿತ್ತು ಎಂದು ಓರ್ವ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ತಮ್ಮ ಮನೆ ಬಾಗಿಲಿಗೆ ಬಂದ ನಾಲ್ವರು, ತನ್ನ ಪತಿಯನ್ನು ಬಲವಂತವಾಗಿ ಕಾರೊಂದರಲ್ಲಿ ಕರೆದೊಯ್ದರು ಎಂದು ಚಂದ್ರಕಾಂತ್ ಭಾನು ಅವರ ದ್ವಿತೀಯ ಪತ್ನಿ ಅಫ್ಸಾನಾ ಅರಬ್ ತಮ್ಮ ದೂರಿನಲ್ಲಿ ಆರೋಪಿಸಿದ್ದರು.
ಈ ಘಟನೆಗೂ, ತನ್ನ ಪತಿಯ ಮೊದಲ ಪತ್ನಿಯ ಮಗನೊಂದಿಗೆ ತನ್ನ ಪತಿಗಿದ್ದ ಆಸ್ತಿ ವ್ಯಾಜ್ಯಕ್ಕೂ ಸಂಬಂಧವಿದೆ ಎಂದು ಅವರು ಆರೋಪಿಸಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಈ ದೂರನ್ನು ಆಧರಿಸಿ ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದ ವೆರ್ಸೋವಾ ಠಾಣೆ ಪೊಲೀಸರು, ಅಪರಾಧ ವಿಭಾಗದೊಂದಿಗೆ ತನಿಖೆಗೆ ಚಾಲನೆ ನೀಡಿದ್ದರು. ಬಳಿಕ, ಅವರು ಪಾಲ್ಘರ್ ಜಿಲ್ಲೆಯ ವಸಾಯಿಯಲ್ಲಿರುವ ಪುನರ್ವಸತಿ ಕೇಂದ್ರವೊಂದರಲ್ಲಿ ಚಂದ್ರಕಾಂತ್ ಭಾನುರನ್ನು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ ಎಂದು ಅವರು ಹೇಳಿದ್ದಾರೆ.
ವಾಸ್ತವವಾಗಿ ಮದ್ಯವ್ಯಸನಿಯಾಗಿದ್ದ ಚಂದ್ರಕಾಂತ್ ಭಾನು ಬಗ್ಗೆ ಕಳವಳಗೊಂಡಿದ್ದ ಅವರ ಮೊದಲ ಪತ್ನಿ ಈ ಅಪಹರಣದ ಯೋಜನೆ ರೂಪಿಸಿ, ಅವರ ಇಚ್ಛೆಗೆ ವಿರುದ್ಧವಾಗಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಬಲವಂತವಾಗಿ ದಾಖಲಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಚಂದ್ರಕಾಂತ್ ಭಾನು ಅವರನ್ನು ಅವರ ನಿವಾಸದಿಂದ ಬಲವಂತವಾಗಿ ಕರೆದೊಯ್ದಿದ್ದವರು ಪುನರ್ವಸತಿ ಕೇಂದ್ರದ ಉದ್ಯೋಗಿಗಳಾಗಿದ್ದು, ಅವರದನ್ನು ಚಂದ್ರಕಾಂತ್ ಭಾನುರ ಮೊದಲ ಪತ್ನಿಯ ಸೂಚನೆಯ ಮೇರೆಗೆ ಮಾಡಿದ್ದರು ಎಂದೂ ಅವರು ಹೇಳಿದ್ದಾರೆ.