×
Ad

ಕರ್ನೂಲ್ ಬಸ್ ದುರಂತಕ್ಕೆ ಮದ್ಯಪಾನ ಮಾಡಿದ್ದ ಬೈಕ್ ಸವಾರ ಕಾರಣವಾಗಿರಬಹುದು : ವಿಧಿವಿಜ್ಞಾನ ವರದಿ

ಬಸ್ ಅಪಘಾತಕ್ಕೆ ಮೊದಲೇ ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದ ಸವಾರ

Update: 2025-10-26 15:51 IST

Photo Credit : PTI 

ಹೈದರಾಬಾದ್: ಹೈದರಾಬಾದ್‌ನಿಂದ ಬೆಂಗಳೂರಿಗೆ ಹೊರಟಿದ್ದ ಕಾವೇರಿ ಟ್ರಾವೆಲ್ಸ್ ಬಸ್ ಕರ್ನೂಲ್‌ನಲ್ಲಿ ಬೆಂಕಿಗಾಹುತಿಯಾಗಿ 19 ಪ್ರಯಾಣಿಕರು ಸಜೀವ ದಹನವಾಗಿದ್ದರು. ಈ ದುರಂತಕ್ಕೆ ಮದ್ಯಪಾನ ಮಾಡಿ ಬೈಕ್ ಚಲಾಯಿಸಿದ ಬೈಕ್ ಸವಾರನೇ ಕಾರಣವಾಗಿರಬಹುದು ಎಂದು ವಿಧಿವಿಜ್ಞಾನ ವರದಿ ಹೇಳಿದೆ ಎಂದು indianexpress ವರದಿ ತಿಳಿಸಿದೆ.

"ಬೈಕ್ ಸವಾರ ಮದ್ಯಪಾನ ಮಾಡಿದ್ದ ಮತ್ತು ಬೈಕ್‌ ಹೆಡ್‌ಲೈಟ್‌ ಸರಿಯಿರಲಿಲ್ಲ. ಮದ್ಯದ ಅಮಲಿನಲ್ಲಿ ಅತಿವೇಗದ ಚಾಲನೆಯಿಂದಾಗಿ ಬೈಕ್ ಅಪಘಾತಕ್ಕೀಡಾಗಿದೆ" ಎಂದು ಕರ್ನೂಲ್ ಡಿಐಜಿ ಕೆ ಪ್ರವೀಣ್ ಅವರು ಹೇಳಿರುವುದಾಗಿ indianexpress ವರದಿಯಲ್ಲಿ ಉಲ್ಲೇಖಿಸಿದೆ.

“ಬಸ್ ವಿಭಜಕದ ಬಳಿ ಬಿದ್ದಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದೆ. ಬಸ್ ಬೈಕ್ ಮೇಲೆ ಹರಿದು ಸುಮಾರು 300 ಮೀಟರ್‌ಗಳಷ್ಟು ಎಳೆದೊಯ್ದಿದೆ. ನಂತರ ಅಗ್ನಿ ಅವಘಡಕ್ಕೆ ಕಾರಣವಾದ ಸ್ಫೋಟ ಸಂಭವಿಸಿದೆ” ಎಂದು ಡಿಐಜಿ ಪ್ರವೀಣ್ ಹೇಳಿದರು.

ಬೈಕ್ ಸವಾರ ಮದ್ಯಪಾನ ಮಾಡಿದ್ದ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ವೈದ್ಯಕೀಯ ಪರೀಕ್ಷೆಯಲ್ಲಿ ಕೂಡ ಇದು ಬಹಿರಂಗವಾಗಿದೆ ಎಂದು ಡಿಐಜಿ ಪ್ರವೀಣ್ ಹೇಳಿದರು.

ಬೈಕ್‌ಗೆ ಢಿಕ್ಕಿ ಹೊಡೆದ ಬಳಿಕ ಬಸ್ ಬೆಂಕಿಗಾಹಾತಿಯಾಗಿದೆ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಬೈಕ್ ಸವಾರ ಕರ್ನೂಲ್ ನಿವಾಸಿ ಬಿ ಶಿವಶಂಕರ್ (24) ಬಸ್ ಅಪಘಾತಕ್ಕೆ ಮೊದಲೇ ಬೈಕ್ ಸ್ಕಿಡ್ ಆಗಿ ಮೃತಪಟ್ಟಿದ್ದ ಎಂದು ಬೈಕ್ ಸಹಸವಾರ ಯೆರ್ರಿ ಸ್ವಾಮಿ ಪೊಲೀಸ್ ವಿಚಾರಣೆಯ ವೇಳೆ ಹೇಳಿದ್ದಾನೆ.

ಶುಕ್ರವಾರ ಬೆಳಿಗ್ಗೆ 2.24ರ ಸುಮಾರಿಗೆ ಪೆಟ್ರೋಲ್ ಬಂಕ್‌ನಿಂದ ಹೊರಟ ಸ್ವಲ್ಪ ಸಮಯದಲ್ಲಿಯೇ ಚಿನ್ನತೇಕೂರು ಬಳಿ ಬೈಕ್ ಸ್ಕಿಡ್ ಆಗಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಶಿವಶಂಕರ್‌ಗೆ ಗಂಭೀರವಾಗಿ ಗಾಯವಾಗಿತ್ತು. ನನಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಶಿವಶಂಕರ್ ದೇಹವನ್ನು ಸ್ವಲ್ಪ ದೂರ ಎಳೆದು ಉಸಿರಾಟ ಪರಿಶೀಲಿಸಿದೆ. ಈ ವೇಳೆ ಮೃತಪಟ್ಟಿರುವುದು ಕಂಡು ಬಂದಿದೆ. ಬೈಕ್ ಅನ್ನು ಪಕ್ಕಕ್ಕೆ ಎಳೆಯಲು ಪ್ರಯತ್ನಿಸುತ್ತಿದ್ದಾಗ ದಿಢೀರನೇ ಬಸ್ ಬಂದು ಬೈಕ್‌ಗೆ ಢಿಕ್ಕಿ ಹೊಡೆದಿದೆ. ಬಸ್ ಬೈಕ್ ಅನ್ನು ಸ್ವಲ್ಪ ದೂರ ಎಳೆದೊಯ್ದಿದೆ’ ಎಂದು ಯೆರ್ರಿ ಸ್ವಾಮಿ ವಿಚಾರಣೆಯ ವೇಳೆ ತಿಳಿಸಿರುವುದಾಗಿ ಕರ್ನೂಲ್ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಾಂತ್ ಪಾಟೀಲ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News