×
Ad

ಸುರಕ್ಷಿತ ಸಾಗರೋತ್ತರ ಪ್ರಯಾಣದ ಖಾತರಿಗೆ ಇ-ಮೈಗ್ರೇಟ್ ಪೋರ್ಟಲ್, ಮೊಬೈಲ್ ಆ್ಯಪ್ ಬಿಡುಗಡೆ

Update: 2024-10-14 21:38 IST

ಎಸ್. ಜೈಶಂಕರ್ | PC : newsonair.gov.in

ಹೊಸದಿಲ್ಲಿ : ತನ್ನ ನಾಗರಿಕರಿಗೆ ಸುರಕ್ಷಿತ ಹಾಗೂ ಕಾನೂನುಬದ್ಧ ಸಾಗರೋತ್ತರ ಪ್ರಯಾಣವನ್ನು ಸುಗಮಗೊಳಿಸುವ ಉದ್ದೇಶದೊಂದಿಗೆ ಭಾರತ ಸೋಮವಾರ ಪರಿಷ್ಕೃತ ಇ-ಮೈಗ್ರೇಟ್ ಪೋರ್ಟಲ್ ಹಾಗೂ ಮೊಬೈಲ್ ಆ್ಯಪ್ ಅನ್ನು ಲೋಕಾರ್ಪಣೆಗೊಳಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್, ಬದುಕನ್ನು ಸುಲಭಗೊಳಿಸುವ ಹಾಗೂ ಜನ ಕೇಂದ್ರಿತ ಆಡಳಿತವನ್ನು ಪ್ರೋತ್ಸಾಹಿಸುವ ಸರಕಾರದ ಬದ್ಧತೆಯ ಕುರಿತು ಗಮನ ಸೆಳೆದರು.

ಕಳೆದ ವರ್ಷ ಸುರಕ್ಷಿತ ಹಾಗೂ ಕಾನೂನು ಬದ್ದ ಪ್ರಯಾಣ ಮಾರ್ಗಗಳ ಕುರಿತು ಜಾಗೃತಿ ಮೂಡಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಅಭಿಯಾನ ನಡೆಸಿದ ಸಂದರ್ಭ, ಪ್ರಧಾನಿ ನರೇಂದ್ರ ಮೋದಿ ಅವರು ‘ಸುರಕ್ಷಿತವಾಗಿ ಹೋಗಿ, ಚೆನ್ನಾಗಿ ತರಬೇತಿ ಪಡೆಯಿರಿ’ ಆಶಯದೊಂದಿಗೆ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆಗೊಳಿಸಿದ್ದರು. ಇಂದಿನ ಕಾರ್ಯಕ್ರಮ ಆ ಆಶಯವನ್ನು ಪ್ರತಿಬಿಂಬಿಸಿದೆ ಎಂದು ಅವರು ಹೇಳಿದ್ದಾರೆ.

ವಿದೇಶದಲ್ಲಿರುವ ಭಾರತೀಯ ಕಾರ್ಮಿಕರಿಗೆ ಸುರಕ್ಷಿತ, ಹೆಚ್ಚು ಪಾರದರ್ಶಕ ಹಾಗೂ ಅಂತರ್ಗತ ಪ್ರಯಣವನ್ನು ರೂಪಿಸುವತ್ತ ನೂತನ ಇ-ಮೈಗ್ರೇಟ್ ಪೋರ್ಟಲ್ ವಿ2.0 ಗಮನಾರ್ಹ ಹೆಜ್ಜೆಯಾಗಿದೆ ಎಂದು ಅವರು ವಿವರಿಸಿದರು.

ಕ್ರಮಬದ್ಧ, ಸುರಕ್ಷಿತ, ನಿರಂತರ ಹಾಗೂ ಜವಾಬ್ದಾರಿಯುತ ವಲಸೆಯನ್ನು ಪ್ರೋತ್ಸಾಹಿಸುವ ಸುಸ್ಥಿರ ಅಭಿವೃದ್ಧಿಗಾಗಿ 2030ರ ಮಾರ್ಗಸೂಚಿಯ ಗುರಿ 10ರೊಂದಿಗೆ ಈ ಪೋರ್ಟಲ್ ಜೋಡಣೆಯಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಈ ಪೋರ್ಟಲ್ ಕೇವಲ ಡಿಜಿಟಲ್ ಸಾಧನಕ್ಕಿಂತ ಹೆಚ್ಚಿನದ್ದು. ವಿದೇಶಿ ನೆಲದಲ್ಲಿ ನಮ್ಮ ಕಾರ್ಮಿಕರ ಹಕ್ಕುಗಳು ಹಾಗೂ ಗೌರವವನ್ನು ರಕ್ಷಿಸುವ ನಮ್ಮ ಬದ್ಧತೆಯ ಸಂಕೇತ ಹಾಗೂ ಭರವಸೆಯ ದಾರಿ ದೀಪ ಎಂದು ಜೈಶಂಕರ್ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News