×
Ad

ತೀರ್ಪಿನಲ್ಲಿ ಮತೀಯ ಹೇಳಿಕೆ ನೀಡಿದ ಬರೇಲಿ ನ್ಯಾಯಾಧೀಶರ ವಿರುದ್ಧ ಕ್ರಮಕ್ಕೆ ವಕೀಲರ ಸಂಘಟನೆಯಿಂದ ಸಿಜೆಐಗೆ ಪತ್ರ

Update: 2024-03-13 16:53 IST

ನ್ಯಾಯಾಧೀಶ ರವಿ ಕುಮಾರ್‌ ದಿವಾಕರ್‌ (X@DiwakarJudge)

ಹೊಸದಿಲ್ಲಿ: ಉತ್ತರ ಪ್ರದೇಶದಲ್ಲಿ 2010ರಲ್ಲಿ ನಡೆದ ಹಿಂಸಾಚಾರ ಪ್ರಕರಣದ ತೀರ್ಪನ್ನು ನೀಡುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್‌ ಅವರ ಧಾರ್ಮಿಕ ಹಿನ್ನೆಲೆಯನ್ನು ಶ್ಲಾಘಿಸಿ ಮತ್ತು ದೇಶದಲ್ಲಿ ಮತೀಯ ಹಿಂಸಾಚಾರಕ್ಕೆ ಮುಸ್ಲಿಮರನ್ನು ದೂಷಿಸಿದ ನ್ಯಾಯಾಧೀಶ ರವಿ ಕುಮಾರ್‌ ದಿವಾಕರ್‌ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ಅವರಿಗೆ ಆಲ್‌ ಇಂಡಿಯಾ ಲಾಯರ್ಸ್‌ ಅಸೋಸಿಯೇಶನ್‌ ಫಾರ್‌ ಜಸ್ಟಿಸ್‌ ಪತ್ರ ಬರೆದಿದೆ.

ತಮ್ಮ ಮಾರ್ಚ್‌ 5ರ ಆದೇಶದಲ್ಲಿ ರವಿ ಕುಮಾರ್‌ ದಿವಾಕರ್‌ ಮಾಡಿರುವ ಅನಗತ್ಯ ಹೇಳಿಕೆಗಳನ್ನು ದಾಖಲೆಗಳಿಂದ ಕಿತ್ತೊಗೆಯುವಂತೆಯೂ ಅಸೋಸಿಯೇಶನ್‌ ಕೋರಿದೆ. ಈ ತೀರ್ಪಿನಲ್ಲಿ ನ್ಯಾಯಾಧೀಶರ ಹೇಳಿಕೆಗಳು ಮತ್ತು ತೀರ್ಮಾನಗಳು ವಿವಾದಿತ, ಪಕ್ಷಪಾತತನದಿಂದ ಕೂಡಿವೆ ಮತ್ತು ಅಸಂವಿಧಾನಿಕವಾಗಿದೆ ಎಂದು ಅಸೋಸಿಯೇಶನ್‌ ಹೇಳಿದೆ.

ಸಂವಿಧಾನ ಮತ್ತು ಅದರ ಮೂಲಭೂತ ಮೌಲ್ಯಗಳನ್ನು ಎತ್ತಿಹಿಡಿಯುವ ಬದಲು ಬಹುಸಂಖ್ಯಾತ ದೃಷ್ಟಿಕೋನಕ್ಕೆ ನ್ಯಾಯಾಧೀಶರು ಒಲವು ತೋರಿಸಿದ್ದಾರೆಂದು ವಕೀಲರ ಸಂಘಟನೆ ಹೇಳಿದೆ.

ಬರೇಲಿಯ ತ್ವರಿತಗತಿ ನ್ಯಾಯಾಲಯದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿರುವ ದಿವಾಕರ್‌ ಮಾರ್ಚ್‌ 5ರಂದು ಈ ತೀರ್ಪು ನೀಡಿದ್ದರು. ಬರೇಲಿಯಲ್ಲಿ 2010ರಲ್ಲಿ ನಡೆದ ಮತೀಯ ಹಿಂಸಾಚಾರ ಪ್ರಕರಣದಲ್ಲಿ ಖ್ಯಾತ ಮುಸ್ಲಿಂ ಧರ್ಮಗುರು-ರಾಜಕಾರಣಿ ಮೌಲಾನ ತೌಖೀರ್‌ ರಝಾ ಖಾನ್‌ ಅವರ ಹೆಸರನ್ನು ಈ ಪ್ರಕರಣದ ಚಾರ್ಚ್‌ಶೀಟ್‌ನಲ್ಲಿ ಸೇರಿಸಿ ಅವರಿಗೆ ಮಾರ್ಚ್‌ 11ರಂದು ಹಾಜರಾಗುವಂತೆ ಸೂಚಿಸಿದ್ದರು. ಅವರನ್ನು ದಂಗೆಗಳ ಪ್ರಮುಖ ಸಂಚುಕೋರ ಎಂದು ನ್ಯಾಯಾಧೀಶರು ಬಣ್ಣಿಸಿದ್ದರು.

ಮುಖ್ಯಮಂತ್ರಿ ಆದಿತ್ಯನಾಥ್‌ ಅವರನ್ನು ಶ್ಲಾಘಿಸಿ, ಧಾರ್ಮಿಕ ವ್ಯಕ್ತಿಯೊಬ್ಬರು ಅಧಿಕಾರದ ಗದ್ದುಗೆಯಲ್ಲಿರುವುದಕ್ಕೆ ಅವರು ದೊಡ್ಡ ಉದಾಹರಣೆ ಎಂದಿದ್ದರು.

ಈ ಹಿಂದೆ ವಾರಣಾಸಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾಗ ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಿವಾದಿತ ಆದೇಶ ನೀಡಿದ್ದ ದಿವಾಕರ್‌, ಮಾರ್ಚ್‌ 5ರ ತೀರ್ಪಿನಲ್ಲಿ ಹೇಳಿಕೆ ನೀಡಿ ರಾಜಕೀಯ ಪಕ್ಷಗಳು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಕೆ ಮಾಡುವುದರಿಂದ ದಂಗೆಗಳು ನಡೆಯುತ್ತಿವೆ ಎಂದಿದ್ದರಲ್ಲದೆ ಜ್ಞಾನವಾಪಿ ಪ್ರಕರಣ ಉಲ್ಲೇಖಿಸಿ ಮುಸ್ಲಿಂ ಗುಂಪುಗಳಿಂದ ಬೆದರಿಕೆ ಎದುರಿಸಿ ತಾವು ಮತ್ತು ತಮ್ಮ ಕುಟುಂಬ ಭಯದಲ್ಲಿ ಜೀವಿಸುವಂತಾಗಿತ್ತು ಎಂದಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News