×
Ad

Uttar Pradesh | ಸಂಭಲ್ ಗುಂಡಿನ ದಾಳಿ ಪ್ರಕರಣದಲ್ಲಿ ಪೊಲೀಸರ ವಿರುದ್ಧ ಎಫ್‌ಐಆರ್ ಗೆ ಆದೇಶಿಸಿದ್ದ ನ್ಯಾಯಾಧೀಶರ ವರ್ಗಾವಣೆ ವಿರೋಧಿಸಿ ವಕೀಲರಿಂದ ಪ್ರತಿಭಟನೆ

Update: 2026-01-22 16:45 IST

Screengrab: X/@DeadlyLaw

ಲಕ್ನೊ: ಮಂಗಳವಾರ ವರ್ಗಾವಣೆಗೊಳಿಸಿರುವ 14 ಮಂದಿ ನ್ಯಾಯಾಂಗ ಅಧಿಕಾರಿಗಳ ಪೈಕಿ, 2024ರಲ್ಲಿ ನಡೆದ ಸಂಭಲ್ ಹಿಂಸಾಚಾರದ ವೇಳೆ ಮುಸ್ಲಿಂ ವ್ಯಕ್ತಿಗೆ ಗುಂಡಿಟ್ಟು ಹತ್ಯೆಗೈದಿದ್ದ ಆರೋಪದ ಮೇಲೆ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಆದೇಶಿಸಿದ್ದ ಸಂಭಲ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವಿಭಾಂಶು ಸುಧೀರ್ ಕೂಡ ಸೇರಿದ್ದಾರೆ. ಈ ವರ್ಗಾವಣೆಯ ವಿರುದ್ಧ ಪ್ರತಿಭಟನೆ ನಡೆಸಿರುವ ವಕೀಲರು, “ಇದು ನ್ಯಾಯದ ಹತ್ಯೆ” ಎಂದು ಖಂಡಿಸಿದ್ದಾರೆ.

ಸಂಭಲ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಲ್ ಇನ್‌ಸ್ಪೆಕ್ಟರ್ ಅನುಜ್ ಚೌಧರಿ ಸೇರಿದಂತೆ ಪೊಲೀಸ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಜನವರಿ 9ರಂದು ನ್ಯಾ. ವಿಭಾಂಶು ಸುಧೀರ್ ಆದೇಶಿಸಿದ್ದರು. ಇದರ ಬೆನ್ನಲ್ಲೇ ಅವರ ವರ್ಗಾವಣೆಯಾಗಿದೆ. ಅವರನ್ನು ಸುಲ್ತಾನಪುರದ ಸಿವಿಲ್ ನ್ಯಾಯಾಧೀಶ (ಹಿರಿಯ ಶ್ರೇಣಿ)ರನ್ನಾಗಿ ವರ್ಗಾಯಿಸಲಾಗಿದೆ. ಇದೀಗ ಸಂಭಲ್ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿ ಆದಿತ್ಯ ಸಿಂಗ್ ಅವರನ್ನು ನೇಮಿಸಲಾಗಿದೆ.

ಇದಕ್ಕೂ ಮುನ್ನ, ಶ್ರೀ ಹರಿಹರ ದೇವಾಲಯ ವಿರುದ್ಧ ಶಾಹಿ ಜಾಮಾ ಮಸೀದಿ ಪ್ರಕರಣದಲ್ಲಿ ಸ್ಥಳ ಸಮೀಕ್ಷೆ ನಡೆಸುವಂತೆ ನ್ಯಾ. ಆದಿತ್ಯ ಸಿಂಗ್ ಆದೇಶಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯಾ. ವಿಭಾಂಶು ಸುಧೀರ್ ಅವರ ವರ್ಗಾವಣೆಯನ್ನು ಖಂಡಿಸಿ ಚಾಂದೌಸಿ ಪೊಲೀಸ್ ಠಾಣೆ ಹಾಗೂ ಜಿಲ್ಲಾಡಳಿತ ಕಚೇರಿ ಎದುರು ಪ್ರತಿಭಟನೆ ನಡೆಸಿದ ವಕೀಲರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ, ‘ಇದು ನ್ಯಾಯದ ಹತ್ಯೆ’ ಎಂದು ಬಣ್ಣಿಸಿದರು.

ಪೊಲೀಸ್ ಅಧಿಕಾರಿಗಳ ವಿರುದ್ಧ ಆದೇಶ ನೀಡಿದ್ದಕ್ಕೆ ಉತ್ತಮ ನ್ಯಾಯಾಧೀಶರಿಗೆ ಹಿಂಬಡ್ತಿ ನೀಡಲಾಗಿದೆ ಎಂದು ಅವರು ಆರೋಪಿಸಿದರು.

“ನ್ಯಾ. ವಿಭಾಂಶು ಸುಧೀರ್ ಅವರು ಜಿಲ್ಲೆಯ ನ್ಯಾಯ ವಿತರಣೆ ವ್ಯವಸ್ಥೆಯಲ್ಲಿ ಅದ್ಭುತ ಕೆಲಸ ಮಾಡಿದ್ದಾರೆ. ಅವರ ಅವಧಿಯಲ್ಲಿ ಕೇವಲ ಎಂಟು ದಿನಗಳಲ್ಲಿ ಪ್ರಕರಣಗಳು ಇತ್ಯರ್ಥವಾಗುತ್ತಿದ್ದವು. ಅವರು ಪೊಲೀಸ್ ಸಿಬ್ಬಂದಿ ಹಾಗೂ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಯ ವಿರುದ್ಧ ಆದೇಶ ಹೊರಡಿಸಿದ ನಂತರ ಅವರನ್ನು ವರ್ಗಾವಣೆಗೊಳಿಸಲಾಗಿದೆ. ಅವರ ವರ್ಗಾವಣೆಯನ್ನು ರದ್ದುಗೊಳಿಸಲೇಬೇಕು” ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ಬಾರ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷ ರಾಜೇಶ್ ಯಾದವ್ ಆಗ್ರಹಿಸಿದ್ದಾರೆ.

ನ್ಯಾ. ವಿಭಾಂಶು ಸುಧೀರ್ ಅವರ ವರ್ಗಾವಣೆ ತಪ್ಪು ಎಂದು ಹೇಳಿದ ವಕೀಲ ರೋಶನ್ ಸಿಂಗ್ ಯಾದವ್, ಈ ವರ್ಗಾವಣೆಯನ್ನು ಒತ್ತಡದ ಕಾರಣಕ್ಕೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. “ಉತ್ತಮ ನ್ಯಾಯಾಧೀಶರನ್ನು ಶಿಕ್ಷಿಸುವ ಅಧಿಕಾರ ಯಾರಿಗೂ ಇಲ್ಲ. ಈ ವರ್ಗಾವಣೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ನಾನು ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಿಗೆ ಮನವಿ ಮಾಡುತ್ತೇನೆ” ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News