ವಾಹನ ಸವಾರರೇ ಎಚ್ಚರ; ವರ್ಷಕ್ಕೆ ಐದು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಏನು ಶಿಕ್ಷೆ ಗೊತ್ತೇ?
ಸಾಂದರ್ಭಿಕ ಚಿತ್ರ PC: freepik
ಹೊಸದಿಲ್ಲಿ: ವರ್ಷಕ್ಕೆ ಐದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಸಂಚಾರ ನಿಯಮ ಉಲ್ಲಂಘಿಸುವವರಿಗೆ ಮೂರು ತಿಂಗಳ ಕಾಲ ಚಾಲನಾ ನಿಷೇಧ ವಿಧಿಸಲು ಕೇಂದ್ರ ಸಾರಿಗೆ ಸಚಿವಾಲಯ ಮುಂದಾಗಿದೆ. ಈ ಸಂಬಂಧ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ಅನರ್ಹತೆ ಅಥವಾ ಚಾಲನಾ ಪರವಾನಗಿ (ಲೈಸನ್ಸ್) ರದ್ದುಪಡಿಸುವ ಅಂಶವನ್ನು ಹೊಸದಾಗಿ ಸೇರಿಸಲಾಗಿದೆ. ಪದೇಪದೇ ಸಂಚಾರ ನಿಯಮ ಉಲ್ಲಂಘಿಸುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದೇ ಇದರ ಉದ್ದೇಶವಾಗಿದೆ.
ಲೈಸನ್ಸ್ ಅಮಾನತುಪಡಿಸುವ ಕುರಿತು ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಓ) ಅಥವಾ ಜಿಲ್ಲಾ ಸಾರಿಗೆ ಕಚೇರಿಗೆ ನೀಡಲಾಗಿದೆ. ಹೊಸ ನಿಯಮಾವಳಿಯಡಿ ಲೈಸನ್ಸ್ ನೀಡುವ ಪ್ರಾಧಿಕಾರವು ಲೈಸನ್ಸ್‌ದಾರರ ಅಹವಾಲನ್ನು ಆಲಿಸಿ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತದೆ.
ಈ ಸಂಬಂಧ ಅಧಿಸೂಚನೆಯನ್ನು ಬುಧವಾರ ಹೊರಡಿಸಲಾಗಿದ್ದು, ಐದು ಅಥವಾ ಹೆಚ್ಚು ಬಾರಿ ಸಂಚಾರ ಅಪರಾಧ ಎಸಗುವವರ ಲೈಸನ್ಸ್ ಅನರ್ಹಗೊಳಿಸುವ ಕ್ರಮ ಜನವರಿ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಲಿದೆ.
ಅಧಿಸೂಚನೆಯ ಪ್ರಕಾರ, ಹಿಂದಿನ ವರ್ಷದಲ್ಲಿ ದಾಖಲಾಗಿರುವ ಅಪರಾಧಗಳನ್ನು ಮುಂದಿನ ವರ್ಷಕ್ಕೆ ಪರಿಗಣಿಸಲಾಗುವುದಿಲ್ಲ. ಇದುವರೆಗೆ ಲೈಸನ್ಸಿಂಗ್ ಅಧಿಕಾರಿಗಳಿಗೆ ಚಾಲನಾ ಪರವಾನಗಿ ಅನರ್ಹತೆಗೆ ಸಂಬಂಧಿಸಿದಂತೆ 24 ನಿಬಂಧನೆಗಳಡಿ ಕ್ರಮ ಕೈಗೊಳ್ಳುವ ಅವಕಾಶವಿತ್ತು. ವಾಹನ ಕಳವು, ಪ್ರಯಾಣಿಕರ ಮೇಲೆ ಹಲ್ಲೆ, ಪ್ರಯಾಣಿಕರ ಅಪಹರಣ, ವೇಗ ಮಿತಿ ಮೀರಿ ಚಾಲನೆ, ಓವರ್‌ಲೋಡ್ ಹಾಗೂ ವಾಹನ ಅಪಹರಣದಂತಹ ಪ್ರಕರಣಗಳು ಇದರೊಳಗೆ ಸೇರಿದ್ದವು.
ಇದೀಗ ಹೊಸ ನಿಬಂಧನೆಯಡಿ ಹೆಲ್ಮೆಟ್ ಧರಿಸದಿರುವುದು, ಸೀಟ್‌ಬೆಲ್ಟ್ ಧರಿಸದಿರುವುದು, ಸಿಗ್ನಲ್ ಜಂಪ್ ಸೇರಿದಂತೆ ಐದು ಅಥವಾ ಹೆಚ್ಚಿನ ಸಂಚಾರ ಅಪರಾಧಗಳನ್ನು ಎಸಗುವವರ ಲೈಸನ್ಸ್ ಕೂಡ ಅಮಾನತುಗೊಳ್ಳಲಿದೆ.