×
Ad

Andhra Pradesh| ಟೈರ್ ಸಿಡಿದು ಲಾರಿಗೆ ಢಿಕ್ಕಿಯಾದ ಬಸ್; ಮೂವರು ಸಜೀವ ದಹನ

36 ಪ್ರಯಾಣಿಕರ ರಕ್ಷಣೆ, 15ಕ್ಕೂ ಹೆಚ್ಚು ಮಂದಿಗೆ ಗಾಯ

Update: 2026-01-22 11:45 IST

PC: Screengrab/X.com/jsuryareddy

ಕರ್ನೂಲ್, ಜ.22: ಆಂಧ್ರಪ್ರದೇಶದ ನಂದ್ಯಾಲ್ ಜಿಲ್ಲೆಯ ಸಿರೆಲ್ಲಮೆಟ್ಟಾ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಬಸ್‌ಗೆ ಬೆಂಕಿ ಹೊತ್ತಿಕೊಂಡು ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನೆಲ್ಲೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಖಾಸಗಿ ಬಸ್‌ನ ಟೈರ್ ಸಿಡಿದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಎದುರಿನಿಂದ ಬರುತ್ತಿದ್ದ ಲಾರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ತೀವ್ರತೆಯಿಂದ ಬಸ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿತು.

ಅಪಘಾತದಲ್ಲಿ ಬಸ್ ಚಾಲಕ, ಲಾರಿ ಚಾಲಕ ಹಾಗೂ ಲಾರಿ ಕ್ಲೀನರ್ ಸಜೀವ ದಹನಗೊಂಡಿದ್ದಾರೆ. ಬೆಂಕಿ ವ್ಯಾಪಿಸುತ್ತಿದ್ದಂತೆಯೇ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಭೀತರಾದರು ಎಂದು ತಿಳಿದುಬಂದಿದೆ.

ಈ ನಡುವೆ ಸ್ಥಳದಲ್ಲಿದ್ದ ಡಿಸಿಎಂ ವಾಹನದ ಚಾಲಕನೊಬ್ಬ ಧೈರ್ಯ ಪ್ರದರ್ಶಿಸಿ ಬಸ್‌ನ ಕಿಟಕಿಗಳನ್ನು ಒಡೆದು ಸುಮಾರು 36 ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕರೆತಂದು ದೊಡ್ಡ ದುರಂತವನ್ನು ತಪ್ಪಿಸಿದರು. ಅಪಘಾತದಲ್ಲಿ 15ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು 108 ಆಂಬ್ಯುಲೆನ್ಸ್‌ಗಳ ಮೂಲಕ ನಂದ್ಯಾಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತಕ್ಕೀಡಾದ ವಾಹನ ಎಆರ್ ಬಿಸಿವಿಆರ್ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಎಂದು ಗುರುತಿಸಲಾಗಿದೆ.

ನಂದ್ಯಾಲ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುನೀಲ್ ಶಿಯೋರನ್ ಅವರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆಯ ಕಾರಣಗಳ ಕುರಿತು ತನಿಖೆ ಕೈಗೊಂಡಿದ್ದಾರೆ.

ರಸ್ತೆ ಮತ್ತು ಕಟ್ಟಡ ಸಚಿವ ಬಿ.ಸಿ. ಜನಾರ್ದನ ರೆಡ್ಡಿ ಅವರು ಘಟನೆಯ ಕುರಿತು ಸಂತಾಪ ವ್ಯಕ್ತಪಡಿಸಿ, ಮೃತರ ಕುಟುಂಬಗಳಿಗೆ ಸಾಂತ್ವನ ಸೂಚಿಸಿದ್ದಾರೆ. ಜೊತೆಗೆ ಗಾಯಾಳುಗಳಿಗೆ ಅಗತ್ಯವಾದ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News