ಏನಾದರೂ ರಚನಾತ್ಮಕ ಕೆಲಸ ಮಾಡು: ಬಾಂಗ್ಲಾದೇಶವನ್ನು ಕ್ರಿಕೆಟ್‌ನಿಂದ ನಿಷೇಧಿಸಬೇಕು ಎಂಬ ಅರ್ಜಿ ಸಲ್ಲಿಸಿದ ಕಾನೂನು ವಿದ್ಯಾರ್ಥಿಗೆ ದಿಲ್ಲಿ ಹೈಕೋರ್ಟ್ ತರಾಟೆ
ಬಾಂಗ್ಲಾದೇಶದ ಹಿಂಸಾಚಾರ ಉಲ್ಲೇಖಿಸಿ ಅರ್ಜಿ ಸಲ್ಲಿಕೆ
ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಿಂಸಾಚಾರವನ್ನು ಉಲ್ಲೇಖಿಸಿ, ಬಾಂಗ್ಲಾದೇಶವನ್ನು ಎಲ್ಲಾ ವಿಧದ ಕ್ರಿಕೆಟ್ ಟೂರ್ನಮೆಂಟ್‌ಗಳು ಮತ್ತು ಸ್ಪರ್ಧೆಗಳಿಂದ ನಿಷೇಧಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬುಧವಾರ ದಿಲ್ಲಿ ಹೈಕೋರ್ಟ್ ವಜಾಗೊಳಿಸಿದೆ.
ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಹಾಗೂ ನ್ಯಾಯಮೂರ್ತಿ ತೇಜಸ್ ಕಾರಿಯಾ ಅವರನ್ನು ಒಳಗೊಂಡ ನ್ಯಾಯಪೀಠ, ಇಂತಹ ವಿಚಾರದಲ್ಲಿ ಮುಂದುವರಿದರೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಅರ್ಜಿದಾರರಿಗೆ ಕಠಿಣ ಎಚ್ಚರಿಕೆ ನೀಡಿತು.
“ಇದು ಯಾವ ರೀತಿಯ ಅರ್ಜಿ? ವಿದೇಶಾಂಗ ವ್ಯವಹಾರಗಳಿಗೆ ಸಂಬಂಧಿಸಿದ ನೀತಿ ನಿರ್ಧಾರಗಳನ್ನು ಕೈಗೊಳ್ಳುವಂತೆ ನೀವು ನಮ್ಮನ್ನು ಕೇಳುತ್ತಿದ್ದೀರಿ. ಇದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಬಿಟ್ಟುಕೊಡಬೇಕು. ತುಂಬಾ ಬೇಸರವಾಗುತ್ತಿದೆ. ಬಾಂಗ್ಲಾದೇಶದಲ್ಲಿ ತನಿಖೆ ನಡೆಸುವಂತೆ ನೀವು ನಮ್ಮನ್ನು ಕೇಳುತ್ತಿದ್ದೀರಿ. ನಮ್ಮ ರಿಟ್ ವ್ಯಾಪ್ತಿ ಅಲ್ಲಿಗೆ ಹೋಗುತ್ತದೆಯೇ? ನಿಮ್ಮ ಮನವಿಯನ್ನು ಗಮನಿಸಿ. ದಯವಿಟ್ಟು ಯಾವುದಾದರೂ ರಚನಾತ್ಮಕ ವಿಚಾರವನ್ನು ಮುಂದಿಟ್ಟು ಬರಲಿ. ಇಂತಹ ರಿಟ್ ಅನ್ನು ನಾವು ಹೊರಡಿಸಲು ಸಾಧ್ಯವೇ? ಟೂರ್ನಿಯನ್ನು ಯಾರು ಆಯೋಜಿಸುತ್ತಿದ್ದಾರೆ? ಐಸಿಸಿ. ಐಸಿಸಿಯನ್ನು ರಿಟ್ ವ್ಯಾಪ್ತಿಗೆ ಒಳಪಡಿಸಲು ಸಾಧ್ಯವೇ?” ಎಂದು ಮುಖ್ಯ ನ್ಯಾಯಮೂರ್ತಿ ಡಿ.ಕೆ. ಉಪಾಧ್ಯಾಯ ಅವರು ಅರ್ಜಿದಾರರ ವಕೀಲರನ್ನು ಪ್ರಶ್ನಿಸಿ ತರಾಟೆಗೆ ತೆಗೆದುಕೊಂಡರು.
ಇದಲ್ಲದೆ, “ನೀವು ವಿದ್ಯಾರ್ಥಿಯಾಗಿರುವುದರಿಂದ ಈ ಬಾರಿ ಕೇವಲ ಎಚ್ಚರಿಕೆ ನೀಡುತ್ತಿದ್ದೇವೆ. ನಿಮ್ಮ ವಾದವನ್ನು ನಾವು ಆಲಿಸುತ್ತೇವೆ, ಆದರೆ ಅತ್ಯಂತ ಎಚ್ಚರಿಕೆಯಿಂದ. ನೀವು ವೆಚ್ಚವನ್ನು ಹೇಗೆ ಭರಿಸುತ್ತೀರಿ ಎಂಬುದು ನಮಗೆ ಸ್ಪಷ್ಟವಾಗುತ್ತಿಲ್ಲ” ಎಂದು ನ್ಯಾಯಮೂರ್ತಿಗಳು ಹೇಳಿದರು.