ಭೋಜಶಾಲಾ-ಕಮಾಲ್ ಮೌಲಾ ಮಸೀದಿಯಲ್ಲಿ ವಸಂತ ಪಂಚಮಿಯ ದಿನ ಪ್ರಾರ್ಥನೆ ಸಲ್ಲಿಸಲು ಹಿಂದೂಗಳಿಗೆ ಸುಪ್ರೀಂಕೋರ್ಟ್ ಅನುಮತಿ
Photo credit: newindianexpress.com
ಹೊಸದಿಲ್ಲಿ: ಮಧ್ಯಪ್ರದೇಶದ ಧಾರ್ ಜಿಲ್ಲೆಯ ವಿವಾದಿತ ಭೋಜಶಾಲಾ-ಕಮಾಲ್ ಮೌಲಾ ಮಸೀದಿಯಲ್ಲಿ ವಸಂತ ಪಂಚಮಿಯ ದಿನವಾದ ಶುಕ್ರವಾರ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಹಿಂದೂಗಳು ಪ್ರಾರ್ಥನೆ ಸಲ್ಲಿಸಲು ಸರ್ವೋಚ್ಚ ನ್ಯಾಯಾಲಯವು ಅವಕಾಶ ಕಲ್ಪಿಸಿದೆ. ಇದೇ ವೇಳೆ,ಅದೇ ದಿನ ಅಪರಾಹ್ನ ಒಂದು ಗಂಟೆಯಿಂದ ಮೂರು ಗಂಟೆಯವರೆಗೆ ನಮಾಜ್ ಮಾಡಲು ಮುಸ್ಲಿಮರಿಗೆ ಅನುಮತಿ ನೀಡಿದೆ.
ನಮಾಝ್ ಗೆ ಬರುವ ಮುಸ್ಲಿಮ್ ಸಮುದಾಯದ ಜನರ ಪಟ್ಟಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆಯೂ ಸರ್ವೋಚ್ಚ ನ್ಯಾಯಾಲಯವು ಗುರುವಾರ ವಿಚಾರಣೆ ಸಂದರ್ಭದಲ್ಲಿ ನಿರ್ದೇಶನ ನೀಡಿತು.
ವಸಂತ ಪಂಚಮಿ ಸಂದರ್ಭದಲ್ಲಿ ಸರಸ್ವತಿ ಪೂಜೆಯನ್ನು ಆಚರಿಸಲಾಗುವ ಜ.23,ಶುಕ್ರವಾರದಂದು ಭೋಜಶಾಲಾ ಸಂಕೀರ್ಣದಲ್ಲಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲು ಅನುಮತಿ ನೀಡುವಂತೆ ಹಿಂದು ಮತ್ತು ಮುಸ್ಲಿಮ್ ಗುಂಪುಗಳು ಸರ್ವೋಚ್ಚ ನ್ಯಾಯಾಲಯವನ್ನು ಕೋರಿಕೊಂಡಿದ್ದವು.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜಾಯಮಾಲ್ಯ ಬಾಗ್ಚಿ ಮತ್ತು ವಿಪುಲ ಎಂ.ಪಂಚೋಲಿ ಅವರ ಪೀಠವು,ಪರಸ್ಪರ ಗೌರವಿಸುವಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಸರಕಾರಿ ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಉಭಯ ಸಮುದಾಯಗಳಿಗೆ ಮನವಿ ಮಾಡಿಕೊಂಡಿತು.
ಪ್ರಾರ್ಥನೆಗಳನ್ನು ಸಲ್ಲಿಸಲು ಸ್ಥಳದಲ್ಲಿ ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಏರ್ಪಡಿಸುವಂತೆ ಪೀಠವು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತು.
ಭಾರತೀಯ ಪುರಾತತ್ವ ಸರ್ವೇಕ್ಷಣೆಯಿಂದ (ಎಎಸ್‌ಐ) ಸಂರಕ್ಷಿಸಲ್ಪಟ್ಟಿರುವ ಭೋಜಶಾಲಾವನ್ನು ವಾಗ್ದೇವಿ (ಸರಸ್ವತಿ) ದೇವಸ್ಥಾನವೆಂದು ಹಿಂದೂಗಳು ಪರಿಗಣಿಸಿದ್ದರೆ, ಮುಸ್ಲಿಮರು ಅದನ್ನು ಕಮಾಲ್ ಮೌಲಾ ಮಸೀದಿ ಎಂದು ಕರೆಯುತ್ತಾರೆ.
ಎಎಸ್‌ಐ ಎ.7, 2003ರಂದು ಜಾರಿಗೊಳಿಸಿರುವ ವ್ಯವಸ್ಥೆಯಡಿ ಸಂಕೀರ್ಣದಲ್ಲಿ ಮಂಗಳವಾರಗಳಂದು ಹಿಂದುಗಳು ಪೂಜೆ ಸಲ್ಲಿಸಿದರೆ ಶುಕ್ರವಾರಗಳಂದು ಮುಸ್ಲಿಮರು ನಮಾಝ್ ಮಾಡುತ್ತಾರೆ.