×
Ad

ಲಂಡನ್ ಬೆಳ್ಳಿ ಮಾರುಕಟ್ಟೆ ಬಿಕ್ಕಟ್ಟು; ಭಾರತದಲ್ಲಿ ಬೇಡಿಕೆ ಹೆಚ್ಚಿದ್ದು ಕಾರಣವೇ..?

Update: 2025-10-20 08:52 IST

PC: x.com/FirstMintLLC

ಲಂಡನ್: ಜಾಗತಿಕ ಬೆಳ್ಳಿ ಮಾರುಕಟ್ಟೆ ಇತ್ತೀಚಿನ ದಶಕಗಳಲ್ಲೇ ಅತ್ಯಂತ ತೀವ್ರ ಬಿಕ್ಕಟ್ಟು ಎದುರಿಸುತ್ತಿದ್ದು, ಇದೀಗ ಲಂಡನ್ ನಗರದ ವಾಲ್‌ಸ್ಟ್ರೀಟ್ ಮಾರುಕಟ್ಟೆ ವಿಪ್ಲವದ ಕೇಂದ್ರ ಬಿಂದುವಾಗಿ ಪರಿಣಮಿಸಿದೆ. ಇದಕ್ಕೆ ಭಾರತ ಕಾರಣವೇ ಎನ್ನುವ ಕುತೂಹಲಕಾರಿ ವಿಶ್ಲೇಷಣೆಗಳು ನಡೆಯುತ್ತಿವೆ.

ಭಾರತ ದೀಪಾವಳಿ ಸಡಗರದಲ್ಲಿದ್ದು, ಲಕ್ಷಾಂತರ ಮಂದಿ ಬೇಳ್ಳಿ ಖರೀದಿಗೆ ಮುಗಿ ಬಿದ್ದಿದ್ದಾರೆ. ಇದು ಮಾರುಕಟ್ಟೆಯಲ್ಲಿ ತಲ್ಲಣಕ್ಕೆ ಕಾರಣವಾಗಿದೆ. ಎಂಎಂಟಿಸಿ- ಪ್ಯಾಂಪ್ ಇಂಡಿಯಾ ಪ್ರೈವೇಟ್ ಸಂಸ್ಥೆಯ ವಹಿವಾಟು ಮುಖ್ಯಸ್ಥ ವಿಪಿನ್ ರೈನಾ ಪ್ರಕಾರ, ಇಂಥ ಬೇಡಿಕೆಯನ್ನು ಬೆಳ್ಳಿ ಮಾರುಕಟ್ಟೆ ಹಿಂದೆಂದೂ ಕಂಡಿರಲಿಲ್ಲ.

ದೀಪಾವಳಿ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚುತ್ತದೆ ಎಂಬ ಕಾರಣಕ್ಕೆ ರೈನಾ ಹಲವು ತಿಂಗಳಿಂದಲೇ ಸಿದ್ಧತೆ ಮಾಡಿಕೊಂಡಿದ್ದರು. ಧನಲಕ್ಷ್ಮಿಯ ಹಬ್ಬ ಎಂಬ ಕಾರಣಕ್ಕೆ ಬೆಳ್ಳಿಗೆ ಪ್ರತಿ ವರ್ಷವೂ ಅತ್ಯಧಿಕ ಬೇಡಿಕೆ ಇರುತ್ತದೆ. ಆದರೆ ದೇಶದ ಅತಿದೊಡ್ಡ ಬೆಳ್ಳಿ ಶುದ್ಧೀಕರಣ ಕಂಪನಿಯಾದ ಎಂಎಂಟಿಇ-ಪ್ಯಾಂಪ್ ಇಂಡಿಯಾದ ಇತಿಹಾಸದಲ್ಲೇ ಮೊದಲ ಬಾರಿಗೆ ಬೆಳ್ಳಿಯ ದಾಸ್ತಾನು ಬರಿದಾಗಿದೆ ಎಂದು ಹೇಳುತ್ತಾರೆ.

ಇದರಿಂದಾಗಿ ಬೆಳ್ಳಿ ಹಾಗೂ ಬೆಳ್ಳಿ ನಾಣ್ಯ ಮಾರಾಟಗಾರರಲ್ಲಿ ದಾಸ್ತಾನು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಹೇಳಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬೆಳ್ಳಿ ಖರೀದಿಗೆ ಜನ ಮುಗಿ ಬಿದ್ದಿರುವುದು ನನ್ನ 27 ವರ್ಷದ ಅನುಭವದಲ್ಲೇ ಮೊದಲು ಎಂದ ಅವರು ಬಣ್ಣಿಸಿದ್ದಾರೆ.

ಚಿನ್ನದ ಬೆಲೆ ಗಗನಕ್ಕೇರಿರುವುದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಿದೆ ಎನ್ನುವುದು ವಿಶ್ಲೇಷಕರ ಅಭಿಮತ. ಹೂಡಿಕೆ ಬ್ಯಾಂಕರ್ ಸಾರ್ಥಕ್ ಅಹೂಜಾ ಪ್ರಕಾರ ಅವರ 30 ಲಕ್ಷ ಜಾಲತಾಣ ಅನುಯಾಯಿಗಳು ಬೆಳ್ಳಿಯನ್ನು ಅತಿದೊಡ್ಡ ಖರೀದಿ ಎಂದು ಪ್ರಚಾರ ಮಾಡಿದ್ದಾಗಿ ಬ್ಲೂಮ್ ಬರ್ಗ್ ವರದಿ ಹೇಳಿದೆ.

ಈ ಬೇಡಿಕೆ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕವಾಗಿ ಕೂಡಾ ಹೂಡಿಕೆದಾರರು ಬೆಳ್ಳಿಯತ್ತ ಮುಖ ಮಾಡಿದ್ದಾರೆ. ಭಾರತದ ಮಾರುಕಟ್ಟೆಗೆ ಅತಿದೊಡ್ಡ ಬೆಳ್ಳಿ ಪೂರೈಕೆದಾರ ಕಂಪನಿ ಎನಿಸಿದ ಜೆಪಿ ಮಾರ್ಗನ್ ಚೇಸ್, ಅಕ್ಟೋಬರ್ನಲ್ಲಿ ವಿತರಿಸಲು ಬೆಳ್ಳಿ ಬರಿದಾದ ಹಿನ್ನೆಲೆಯಲ್ಲಿ ನವೆಂಬರ್ ನಲ್ಲಿ ಮಾತ್ರವೇ ಪೂರೈಸಬಹುದಾಗಿದೆ ಎಂದು ಸ್ಪಷ್ಟಪಡಿಸಿದೆ.

ಏತನ್ಮಧ್ಯೆ ಜಾಗತಿಕ ಬೆಳ್ಳಿ ವಹಿವಾಟಿನ ಕೇಂದ್ರ ಎನಿಸಿದ ಲಂಡನ್ ಮಾರುಕಟ್ಟೆಯಲ್ಲಿ ತಲ್ಲಣ ಸಂಭವಿಸಿದೆ. ಬೇಡಿಕೆ ಪೂರೈಸಲಾಗದೇ ಹಲವು ಸಂಸ್ಥೆಗಳು ವಹಿವಾಟು ಸ್ಥಗಿತಗೊಳಿಸಿದ್ದು, ಬೆಳ್ಳಿಯ ಬೆಲೆ ಪ್ರತಿ ಔನ್ಸ್ ಗೆ 54 ಡಾಲರ್ ತಲುಪಿದೆ. ಇಡೀ ಮಾರುಕಟ್ಟೆಯಲ್ಲಿ ಒತ್ತಡದ ಪರಿಸ್ಥಿತಿ ಇದೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಬೆಳ್ಳಿಯ ಪೂರೈಕೆ ಸುಮಾರು 150 ದಶಲಕ್ಷ ಔನ್ಸ್ ಇದ್ದರೆ, ಬೇಡಿಕೆ ಸುಮಾರು 250 ದಶಲಕ್ಷ ಔನ್ಸ್ ಇದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News