ಪ್ರೇಮ ವಿವಾಹಗಳಿಗೆ ಪೋಷಕರ ಅನುಮತಿ ಕಡ್ಡಾಯಗೊಳಿಸುವ ಕುರಿತು ಪರಿಶೀಲನೆ : ಗುಜರಾತ್ ಸಿಎಂ
ಸಾಂದರ್ಭಿಕ ಚಿತ್ರ (PTI)
ಅಹ್ಮದಾಬಾದ್: ಪ್ರೇಮ ವಿವಾಹಗಳಿಗೆ ಪೋಷಕರ ಅನುಮತಿಯನ್ನು ಕಡ್ಡಾಯಗೊಳಿಸುವ ಕುರಿತಾದ ಪ್ರಸ್ತಾವನೆಯನ್ನು ತಮ್ಮ ಸರ್ಕಾರ ಪರಿಶೀಲಿಸುತ್ತಿದೆ ಎಂದು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಹೇಳಿದ್ದಾರೆ.
ಯುವತಿಯರು ತಾವು ಪ್ರೀತಿಸಿದವರನ್ನು ವಿವಾಹವಾಗಲು ಪರಾರಿಯಾಗುತ್ತಿರುವ ವಿಚಾರ ಹಾಗೂ ಪ್ರೇಮ ವಿವಾಹಗಳಿಗೆ ಹೆತ್ತವರ ಅನುಮತಿ ಅಗತ್ಯಗೊಳಿಸುವ ಕುರಿತು ಪರಾಮರ್ಶಿಸಬೇಕಿದೆ ಎಂದು ಆರೋಗ್ಯ ಸಚಿವ ರಿಷಿಕೇಶ್ ಪಟೇಲ್ ತಮಗೆ ತಿಳಿಸಿದ್ದಾರೆ ಎಂದು ಮೆಹ್ಸಾನಾ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅವರು ಹೇಳಿದರು.
“ಸಂವಿಧಾನದ ಬೆಂಬಲವಿದ್ದರೆ ಈ ಕುರಿತು ಅಧ್ಯಯನ ನಡೆಸಲಾಗುವುದು,” ಎಂದು ಅವರು ಹೇಳಿದರು.
ರಾಜ್ಯದ ಕಾಂಗ್ರೆಸ್ ಶಾಸಕಿ ಜೆನಿಬೆನ್ ಠಾಕುರ್ ಹಾಗೂ ಬಿಜೆಪಿ ಶಾಸಕ ಫತೇಹ್ ಸಿನ್ಹ್ ಚೌಹಾಣ್ ಅವರು ಗುಜರಾತ್ ವಿವಾಹ ನೋಂದಣಿಗಳ ಕಾಯಿದೆಗೆ ತಿದ್ದುಪಡಿ ತಂದು ಪೋಷಕರ ಅನುಮತಿ ಕಡ್ಡಾಯಗೊಳಿಸುವ ಕುರಿತು ಆಗ್ರಹಿಸಿದ ನಾಲ್ಕು ತಿಂಗಳ ನಂತರ ಮುಖ್ಯಮಂತ್ರಿಯ ಹೇಳಿಕೆ ಬಂದಿದೆ.
ಮುಖ್ಯಮಂತ್ರಿಯ ಹೇಳಿಕೆಗಳನ್ನು ಬೆಂಬಲಿಸಿ ಕಾಂಗ್ರೆಸ್ ಶಾಸಕ ಇಮ್ರಾನ್ ಖೇಡಾವಾಲ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತ ಮಸೂದೆಯನ್ನು ಮುಂಬರುವ ಮಳೆಗಾಲದ ವಿಧಾನಸಭಾ ಅಧಿವೇಶನದಲ್ಲಿ ಮಂಡಿಸಬೇಕು, ಈ ಮಸೂದೆ ಅಗತ್ಯವಿದೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆತ್ತವರ ನಿಯಂತ್ರಣಕ್ಕೆ ಬರುತ್ತಿಲ್ಲ ಎಂದು ಅವರು ಹೇಳಿದರು.