ಬಿಆರ್ ಒ ಮುಖ್ಯಸ್ಥರಾಗಿ ಲೆಫ್ಟಿನೆಂಟ್ ಜನರಲ್ ರಘು ಶ್ರೀನಿವಾಸನ್ ಅಧಿಕಾರ ಸ್ವೀಕಾರ
ರಘು ಶ್ರೀನಿವಾಸನ್ | Photo: PTI
ಹೊಸದಿಲ್ಲಿ: ಬಿಆರ್ ಒ(ಬಾರ್ಡರ್ ರೋಡ್ಸ್ ಆರ್ಗನೈಸೇಷನ್) ಮಹಾ ನಿರ್ದೇಶಕರಾಗಿ ಲೆಫ್ಟಿನೆಂಟ್ ಜನರಲ್ ರಘು ಶ್ರೀನಿವಾಸನ್ ಶನಿವಾರ ಅಧಿಕಾರ ಸ್ವೀಕರಿಸಿದರು ಎಂದು ರಕ್ಷಣಾ ಸಚಿವಾಲಯವು ಮಾಹಿತಿ ನೀಡಿದೆ. ಈ ಉನ್ನತ ಹುದ್ದೆಯಿಂದ ಲೆಫ್ಟಿನೆಂಟ್ ಜನರಲ್ ರಾಜೀವ್ ಚೌಧರಿ ನಿವೃತ್ತರಾದ ನಂತರ ಅವರು ಬಿಆರ್ ಒ ನ 28ನೇ ಮಹಾ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ತಮ್ಮ ನೇಮಕಕ್ಕೂ ಮುನ್ನ ಪ್ರಧಾನ ಅಧಿಕಾರಿಯಾಗಿದ್ದ ಅವರು ಕಮಾಂಡೆಂಟ್, ಪುಣೆಯ ಮಿಲಿಟರಿ ಎಂಜಿನಿಯರಿಂಗ್ ಕಾಲೇಜಿಗೆ ನೇಮಕಾತಿಗಳನ್ನು ನಡೆಸುತ್ತಿದ್ದರು ಎಂದು ಸಚಿವಾಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶ್ರೀನಿವಾಸನ್ ಅವರು ಖಡಕ್‌ವಾಸ್ಲಾದ ರಕ್ಷಣಾ ಅಕಾಡೆಮಿ ಹಾಗೂ ಡೆಹ್ರಾಡೂನ್‌ನ ಭಾರತೀಯ ಮಿಲಿಟರಿ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದು, 1987ರಲ್ಲಿ ಕಾರ್ಪ್ಸ್ ಆಫ್ ಎಂಜಿನಿಯರ್ಸ್ ಸಂಸ್ಥೆಗೆ ನೇಮಕವಾಗಿದ್ದರು.
"ಶ್ರೀನಿವಾಸನ್ ಅವರು ತಮ್ಮ ಸುದೀರ್ಘ ಸೇವಾವಧಿಯಲ್ಲಿ ಆಪರೇಷನ್ ವಿಜಯ್, ಆಪರೇಷನ್ ರಕ್ಷಕ್ ಹಾಗೂ ಆಪರೇಷನ್ ಪರಾಕ್ರಮ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅವರಿಗೆ ಗಡಿ ಪ್ರದೇಶಗಳಲ್ಲಿ, ವಿಶೇಷವಾಗಿ ಲಡಾಖ್, ಅರುಣಾಚಲ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರಗಳಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ" ಎಂದು ಪ್ರಕಟಣೆ ತಿಳಿಸಿದೆ.