ಮಧ್ಯಪ್ರದೇಶ: ಅತ್ಯಾಚಾರ ಆರೋಪದಿಂದ ಕೌನ್ಸಿಲರ್ ದೋಷಮುಕ್ತ
ಸಾಂದರ್ಭಿಕ ಚಿತ್ರ | PC : PTI
ಭೋಪಾಲ್ : ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಸೆಶನ್ಸ್ ನ್ಯಾಯಾಲಯವೊಂದು ವಾರ್ಡ್ ಕೌನ್ಸಿಲರ್ ಶಫೀಕ್ ಅನ್ಸಾರಿ ಎಂಬವರನ್ನು ಅತ್ಯಾಚಾರ ಪ್ರಕರಣದಿಂದ ದೋಷಮುಕ್ತಗೊಳಿಸಿದೆ. ಅವರ ದೂರಿನ ಆಧಾರದಲ್ಲಿ ತನ್ನ ಮನೆಯನ್ನು ಧ್ವಂಸಗೊಳಿಸಿದ ಕಾರಣಕ್ಕಾಗಿ ಮಹಿಳೆಯು ಅತ್ಯಾಚಾರ ಆರೋಪ ಹೊರಿಸಿದ್ದಳು ಎಂದು ನ್ಯಾಯಾಲಯ ಹೇಳಿದೆ.
ತನ್ನ ಮೇಲೆ ಅತ್ಯಾಚಾರ ನಡೆದಿದೆ ಎಂಬುದಾಗಿ ಎಂಬುದಾಗಿ ಮಹಿಳೆಯು ದೂರು ಸಲ್ಲಿಸಿದ ಬಳಿಕ, ಶಫೀಕ್‌ರ ಮನೆಯನ್ನೂ ಮುನ್ಸಿಪಲ್ ಅಧಿಕಾರಿಗಳು ನಾಲ್ಕು ವರ್ಷಗಳ ಹಿಂದೆ ಧ್ವಂಸಗೊಳಿಸಿದ್ದರು.
ದೂರುದಾರ ಮಹಿಳೆ ಮತ್ತು ಆಕೆಯ ಗಂಡನ ಹೇಳಿಕೆಗಳಲ್ಲಿ ಗಣನೀಯ ವೈರುಧ್ಯಗಳಿವೆ ಎಂದು ರಾಜ್‌ಗಢ ಜಿಲ್ಲೆಯ ಪ್ರಥಮ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಚಿತ್ರೇಂದ್ರ ಸಿಂಗ್ ಸೋಳಂಕಿ ಅಭಿಪ್ರಾಯಪಟ್ಟರು.
‘‘ನಿರ್ದಿಷ್ಟ ಸಮಯದಲ್ಲಿ ಆರೋಪಿ ಶಫೀಕ್ ಅನ್ಸಾರಿಯ ಮನೆಯಲ್ಲಿ ಮಹಿಳೆಯ ಉಪಸ್ಥಿತಿಯೇ ಸಂಶಯಾಸ್ಪದ. ಆರೋಪಿಯು ಮಹಿಳೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದನು ಎಂಬ ಆರೋಪವು ವೈದ್ಯಕೀಯ ಮತ್ತು ವೈಜ್ಞಾನಿಕ ಪರೀಕ್ಷೆಯಲ್ಲಿ ಸಾಬೀತಾಗಿಲ್ಲ. ಘಟನೆಯ ಬಗ್ಗೆ ತನ್ನ ಗಂಡನಿಗೆ ಮಾಹಿತಿ ನೀಡಲು ಅಥವಾ ಪೊಲೀಸರಿಗೆ ದೂರು ನೀಡಲು ವಿಳಂಬಿಸಿರುವುದಕ್ಕೆ ಮಹಿಳೆಯು ತೃಪ್ತಿಕರ ಕಾರಣ ನೀಡಿಲ್ಲ’’ ಎಂದು ನ್ಯಾಯಾಲಯವು ಫೆಬ್ರವರಿ 14ರ ತನ್ನ ತೀರ್ಪಿನಲ್ಲಿ ಹೇಳಿದೆ.
ಅತ್ಯಾಚಾರ ದೂರು ದಾಖಲಾಗುವುದಕ್ಕೂ ಮೊದಲು, ಅತಿಕ್ರಮಣ ನಡೆಸಿದ ಆರೋಪದಲ್ಲಿ ಮಹಿಳೆಯ ಮನೆಯನ್ನು ಮುನಿಸಿಪಲ್ ಅಧಿಕಾರಿಗಳು ಧ್ವಂಸಗೊಳಿಸಿದ್ದರು. ಮಹಿಳೆಯ ಮನೆಯಲ್ಲಿ ಮಾದಕ ದ್ರವ್ಯದ ವ್ಯಾಪಾರ ನಡೆಯುತ್ತಿತ್ತು ಎಂಬುದಾಗಿಯೂ ನೆರೆಮನೆಯವರು ದೂರು ನೀಡಿದ್ದರು.