ಪ್ರಚೋದನಕಾರಿ ಹೇಳಿಕೆ | ಮಹಾರಾಷ್ಟ್ರ ಶಾಸಕ ಆಹ್ವಾಡ್ ವಿರುದ್ಧ ಎಫ್‌ಐಆರ್‌ಗೆ ಥಾಣೆ ನ್ಯಾಯಾಲಯದ ಆದೇಶ
ಜಿತೇಂದ್ರ ಆಹ್ವಾಡ್ | PTI
ಥಾಣೆ: 2018ರಲ್ಲಿ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದ ಆರೋಪದಲ್ಲಿ ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಿತೇಂದ್ರ ಆಹ್ವಾಡ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಥಾಣೆ ನ್ಯಾಯಾಲಯವು ಪೋಲಿಸರಿಗೆ ಆದೇಶಿಸಿದೆ ಎಂದು ಸುದ್ದಿಸಂಸ್ಥೆಯು ಶನಿವಾರ ವರದಿ ಮಾಡಿದೆ.
ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ ಮತ್ತು ದ್ವೇಷವನ್ನು ಸೃಷ್ಟಿಸುವ ಹೇಳಿಕೆಗಳಿಗೆ ಸಂಬಂಧಿಸಿದ ಐಪಿಸಿಯ ಕಲಮ್ ಗಳಡಿ ಎನ್‌ಸಿಪಿ(ಶರದ ಪವಾರ್) ಶಾಸಕ ಆಹ್ವಾಡ್ ವಿರುದ್ಧ ಪ್ರಕರಣ ದಾಖಲಿಸುವಂತೆ ನ್ಯಾಯಾಧೀಶೆ ಮಹಿಮಾ ಸೈನಿ ಅವರು ಫೆ.3ರಂದು ವಿಚಾರಣೆ ಸಂದರ್ಭದಲ್ಲಿ ಭಯಾಂದರ್ ಪೋಲಿಸರಿಗೆ ಆದೇಶಿಸಿದ್ದಾರೆ.
ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಹೊಂದಿದ್ದಕ್ಕಾಗಿ 2018, ಆ.9ರಂದು ಮುಂಬೈನ ಭಯೋತ್ಪಾದನೆ ನಿಗ್ರಹ ದಳ (ಎಟಿಸಿ)ದಿಂದ ಬಂಧಿಸಲ್ಪಟ್ಟಿದ್ದ ವೈಭವ ರಾವುತ್ ಕುರಿತು ಆಹ್ವಾಡ್ ಹೇಳಿಕೆಗಳನ್ನು ನೀಡಿದ್ದರು. ರಾವತ್‌ನಿಂದ ವಶಪಡಿಸಿಕೊಳ್ಳಲಾಗಿದ್ದ ಬಾಂಬ್‌ಗಳು ಮೀಸಲಾತಿಗಾಗಿ ಆಗ್ರಹಿಸಿ ಮರಾಠಾ ಸಮುದಾಯದ ರ‍್ಯಾಲಿಯ ಮೇಲೆ ದಾಳಿಯ ಉದ್ದೇಶವನ್ನು ಹೊಂದಿದ್ದವು ಎಂದು ಅವರು ಆರೋಪಿಸಿದ್ದರು.
ಆಹ್ವಾಡ್ ವಿರುದ್ಧ ಪ್ರಕರಣವನ್ನು ದಾಖಲಿಸುವಂತೆ ಕೋರಿ ಹಿಂದುಸ್ಥಾನ ನ್ಯಾಷನಲ್ ಪಾರ್ಟಿಯ ಯುವ ಘಟಕದ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ನ್ಯಾಯವಾದಿ ಖುಷ್ ಖಂಡೇಲವಾಲ್ ಅವರು ದೂರು ಸಲ್ಲಿಸಿದ್ದರು. ಭಯಾಂದರ್ ಪೋಲಿಸರು ಸೂಕ್ತವಾಗಿ ಸ್ಪಂದಿಸದ ಹಿನ್ನೆಲೆಯಲ್ಲಿ ಅವರು ಥಾಣೆ ನ್ಯಾಯಾಲಯದ ಮೆಟ್ಟಿಲನ್ನೇರಿದ್ದರು.
ಆಹ್ವಾಡ್ ಅವರ ಹೇಳಿಕೆಗಳ ಮೇಲ್ನೋಟದ ಪರಿಶೀಲನೆಯು ಅದು ಐಪಿಸಿಯಡಿ ದ್ವೇಷವನ್ನು ಉತ್ತೇಜಿಸುವಂತಿದೆ ಎಂದು ಸೂಚಿಸುತ್ತದೆ ಎಂದು ನ್ಯಾ.ಸೈನಿ ವಿಚಾರಣೆ ವೇಳೆ ಹೇಳಿದರು.
ಆರೋಪಗಳು ರಾಜಕೀಯ ಪ್ರೇರಿತವಾಗಿವೆ ಮತ್ತು ದೂರುದಾರರು ತನ್ನ ಕಕ್ಷಿದಾರರ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂಬ ಆಹ್ವಾಡ್ ಪರ ವಕೀಲರ ವಾದವನ್ನು ನ್ಯಾ.ಸೈನಿ ಪುರಸ್ಕರಿಸಲಿಲ್ಲ.