×
Ad

ಮಹಾರಾಷ್ಟ್ರ: ಹಿಂದಿ ಕಡ್ಡಾಯವನ್ನು ವಿರೋಧಿಸಿದ ಉದ್ಧವ್ ಠಾಕ್ರೆ

Update: 2025-04-19 20:21 IST

 ಉದ್ಧವ್ ಠಾಕ್ರೆ | PTI 

ಮುಂಬೈ: ಮಹಾರಾಷ್ಟ್ರದಲ್ಲಿ ಹಿಂದಿಯನ್ನು ಕಡ್ಡಾಯವಾಗಿಸುವುದನ್ನು ತನ್ನ ಪಕ್ಷವು ವಿರೋಧಿಸುವುದು ಎಂದು ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಮುಖ್ಯಸ್ಥ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ. ಒಂದನೇ ತರಗತಿಯಿಂದ ಐದನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಹಿಂದಿಯನ್ನು ಕಡ್ಡಾಯ ಮೂರನೇ ಭಾಷೆಯಾಗಿ ಪರಿಚಯಿಸಲು ರಾಜ್ಯ ಸರಕಾರ ನಿರ್ಧರಿಸಿದ ಬಳಿಕ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ಶಿವಸೇನೆ (ಉದ್ಧವ್ ಠಾಕ್ರೆ ಬಣ)ದ ಕಾರ್ಮಿಕ ಘಟಕ ಭಾರತೀಯ ಕಾಮ್ಗಾರ್ ಸೇನಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉದ್ಧವ್ ಠಾಕ್ರೆ, ಹಿಂದಿ ಭಾಷೆಯ ಬಗ್ಗೆ ತನ್ನ ಪಕ್ಷಕ್ಕೆ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದರು. ಆದರೆ, ಅದನ್ನು ಯಾಕೆ ಹೇರಲಾಗುತ್ತಿದೆ ಎಂದು ಅವರು ಪ್ರಶ್ನಿಸಿದರು.

ಮಹಾರಾಷ್ಟ್ರದಲ್ಲಿ ಎರಡು ಭಾಷೆಗಳನ್ನು ಕಲಿಯುವ ಹಿಂದಿನ ಪದ್ಧತಿಯ ಬದಲಿಗೆ, ಮರಾಠಿ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮದ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಐದನೇ ತರಗತಿವರೆಗೆ ತೃತೀಯ ಭಾಷೆಯಾಗಿ ಹಿಂದಿಯನ್ನು ಕಡ್ಡಾಯವಾಗಿಸುವ ನಿರ್ಧಾರವನ್ನು ಮಹಾರಾಷ್ಟ್ರ ಸರಕಾರ ಇತ್ತೀಚೆಗೆ ತೆಗೆದುಕೊಂಡಿದೆ. ರಾಜ್ಯದ ಪ್ರತಿಪಕ್ಷಗಳು ಈ ನಿರ್ಧಾರವನ್ನು ಟೀಕಿಸಿವೆ.

ಬಿಜೆಪಿ ನೇತೃತ್ವದ ಸರಕಾರವು ಮರಾಠಿ ಮಾತನಾಡುವ ವಿದ್ಯಾರ್ಥಿಗಳ ಮೇಲೆ ‘‘ಹಿಂದಿಯನ್ನು ಹೇರುತ್ತಿದೆ’’ ಎಂಬುದಾಗಿ ಶುಕ್ರವಾರ ಮಹಾರಾಷ್ಟ್ರ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹರ್ಷವರ್ಧನ್ ಸಪ್ಕಲ್ ಆರೋಪಿಸಿದ್ದಾರೆ. ರಾಜ್ಯ ಸರಕಾರದ ಈ ಕ್ರಮವು ಪ್ರಾದೇಶಿಕ ಭಾಷೆಗಳು ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ಅಳಿಸುವ ಬೆದರಿಕೆಯನ್ನು ಹುಟ್ಟು ಹಾಕಿದೆ ಎಂದು ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News