ನಗರ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಮಂಡಳಿ ಕೊರತೆ: ರಾಜ್ಯ ಇಸಿಗಳ ಕಾರ್ಯ ನಿರ್ವಹಣೆಗೆ ಸಾಂಸ್ಥಿಕ ನಿರ್ಬಂಧ; ವರದಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ದೇಶದಲ್ಲಿಯ ಹೆಚ್ಚಿನ ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ವಿಳಂಬಗೊಂಡಿರುವುದನ್ನು ಬೆಟ್ಟು ಮಾಡಿರುವ ಇತ್ತೀಚಿನ ಅಧ್ಯಯನ ವರದಿಯೊಂದು,ರಾಜ್ಯ ಚುನಾವಣಾ ಆಯೋಗಗಳು(ಎಸ್‌ಇಸಿ)‘ಸಾಂಸ್ಥಿಕ ನಿರ್ಬಂಧ’ಗಳ ಅಡಿ ಕಾರ್ಯನಿರ್ವಹಿಸುತ್ತಿವೆ ಮತ್ತು ಹೆಚ್ಚಿನವು ಕ್ಷೇತ್ರ ಮರುವಿಂಗಡಣೆಯನ್ನು ನಡೆಸುವ ಹಾಗೂ ಮೀಸಲಾತಿಯನ್ನು ಕಲ್ಪಿಸುವ ಅಧಿಕಾರವನ್ನು ಹೊಂದಿಲ್ಲ ಎಂದು ಹೇಳಿದೆ.
ಎಸ್‌ಇಸಿಗಳು ಗಮನಾರ್ಹ ಸಾಂಸ್ಥಿಕ ನಿರ್ಬಂಧಗಳನ್ನು ಎದುರಿಸುತ್ತಿದ್ದು, 34 ಎಸ್‌ಇಸಿಗಳ ಪೈಕಿ ಕೇವಲ ಎಂಟು ಮಾತ್ರ ಕ್ಷೇತ್ರ ಮರುವಿಂಗಡಣೆ ಮತ್ತು ಮೀಸಲಾತಿ ಅಧಿಕಾರಗಳನ್ನು ಹೊಂದಿವೆ ಮತ್ತು ಕೇವಲ ಎರಡು ಎಸ್‌ಇಸಿಗಳು ಕ್ಷೇತ್ರ ಮರುವಿಂಗಡಣೆ ಅಧಿಕಾರವನ್ನು ಮಾತ್ರ ಹೊಂದಿವೆ. ಆದರೆ 24 ಎಸ್‌ಇಸಿಗಳಿಗೆ ಈ ನಿರ್ಣಾಯಕ ಚುನಾವಣಾ ಪ್ರಕ್ರಿಯೆಗಳ ಮೇಲೆ ಯಾವುದೇ ಅಧಿಕಾರವಿಲ್ಲ ಎಂದು ಲಾಭರಹಿತ ಸಂಸ್ಥೆ ‘ಜನಾಗ್ರಹ’ ಸಿದ್ಧಪಡಿಸಿರುವ ವರದಿಯು ಹೇಳಿದೆ.
ಸ್ಥಳೀಯ ಸರಕಾರಗಳಾದ ಪಂಚಾಯತ್‌ಗಳು ಮತ್ತು ಮುನ್ಸಿಪಾಲಿಟಿಗಳಿಗೆ ಚುನಾವಣೆಗಳನ್ನು ನಡೆಸುವುದು ಎಸ್‌ಇಸಿಗಳ ಹೊಣೆಗಾರಿಕೆಯಾಗಿದೆ.
ಸಿಎಜಿಯಿಂದ ಕಾರ್ಯಕ್ಷಮತೆ ಲೆಕ್ಕ ಪರಿಶೋಧನೆ ವರದಿಗಳನ್ನು ಉಲ್ಲೇಖಿಸಿರುವ ವರದಿಯು ದೇಶಾದ್ಯಂತ ನಗರ ಸ್ಥಳೀಯ ಸರಕಾರ(ಯುಎಲ್‌ಜಿ)ಗಳಿಗೆ ಚುನಾವಣೆಗಳನ್ನು ನಡೆಸುವುದರಲ್ಲಿ ವ್ಯಾಪಕ ವಿಳಂಬವುಂಟಾಗಿದೆ. 17 ರಾಜ್ಯಗಳಲ್ಲಿಯ ಶೇ.61ರಷ್ಟು ಯುಎಲ್‌ಜಿಗಳು ಚುನಾವಣಾ ವಿಳಂಬವನ್ನು ಎದುರಿಸುತ್ತಿವೆ ಎಂದು ಹೇಳಿದೆ.
ಲೋಕಸಭೆ ಮತ್ತು ವಿಧಾನಸಭೆಗಳಂತೆ ಯುಎಲ್‌ಜಿಗಳಿಗೂ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆಯುವುದು ಅಗತ್ಯವಾಗಿದೆ. 74ನೇ ಸಂವಿಧಾನ ತಿದ್ದುಪಡಿ ಕಾಯ್ದೆ ಮತ್ತು ಸರ್ವೋಚ್ಚ ನ್ಯಾಯಾಲಯದ ತೀರ್ಪುಗಳು ಇದನ್ನು ಸ್ಪಷ್ಟಪಡಿಸಿವೆ. ಆದರೂ ರಾಜ್ಯ ಸರಕಾರಗಳು ಅದನ್ನು ಲೆಕ್ಕಿಸದೆ ನೂರಾರು ಯುಎಲ್‌ಜಿಗಳ ಚುನಾವಣೆಗಳನ್ನು ವಿಳಂಬಿಸುತ್ತಿವೆ,ವಿಳಂಬವು ಕೆಲವು ತಿಂಗಳುಗಳಿಂದ ಹಿಡಿದು ಕೆಲವೊಮ್ಮೆ ವರ್ಷಗಳವರೆಗೂ ಎಳೆಯುತ್ತಿದೆ. ಇದನ್ನು ನಿಲ್ಲಿಸುವ ಅಗತ್ಯವಿದೆ ಎಂದು ಜನಾಗ್ರಹದ ಸಿಇಒ ಶ್ರೀಕಾಂತ ವಿಶ್ವನಾಥನ್ ಹೇಳಿದರು.
ಚುನಾವಣಾ ಪ್ರಕ್ರಿಯೆಗಳಿಗೆ ನಿರ್ದಿಷ್ಟ ಸಮಯದ ವೇಳಾಪಟ್ಟಿ ಇಲ್ಲದಿರುವುದು ಚುನಾವಣಾ ನಿಯಮಗಳಿಗೆ ಅನಿಗದಿತ ತಿದ್ದುಪಡಿಗಳು,ಯುಎಲ್‌ಜಿಗಳ ಗಡಿಗಳಲ್ಲಿ ಬದಲಾವಣೆ, ಕ್ಷೇತ್ರ ಮರುವಿಂಗಡಣೆ ಘೋಷಣೆ ಮತ್ತು ರಾಜ್ಯ ಸರಕಾರಗಳಿಂದ ಮೀಸಲಾತಿ ತಿದ್ದುಪಡಿಗೆ ಕಾರಣವಾಗುತ್ತದೆ ಎಂದು ಅಧ್ಯಯನವು ತೋರಿಸಿದೆ. ಇವು ನಗರಗಳಲ್ಲಿ ಚುನಾವಣಾ ಅನಿಶ್ಚಿತತೆಗಳನ್ನು ಸೃಷ್ಟಿಸುತ್ತವೆ ಎಂದು ವರದಿಯು ಹೇಳಿದೆ.
’2047ರ ವೇಳೆಗೆ ನಾವು ಅಭಿವೃದ್ಧಿ ಹೊಂದಿದ ದೇಶವಾಗಲು ಬಯಸಿದ್ದರೆ ಸ್ವತಂತ್ರ,ಅಧಿಕಾರಯುತ ಮತ್ತು ಸಂಪನ್ಮೂಲಯಕ್ತ ಸ್ಥಳೀಯಾಡಳಿತ ಸರಕಾರಕ್ಕೆ ಯಾವುದೇ ಪರ್ಯಾಯವಿಲ್ಲ ’ ಎಂದು ಅಸ್ಸಾಮಿನ ಮಾಜಿ ರಾಜ್ಯ ಚುನಾವಣಾ ಆಯುಕ್ತ ಅಲೋಕ್ ಕುಮಾರ್ ಹೇಳಿದರು.
ಕೃಪೆ: deccanherald.com