ಆಧಾರ್ ತಿದ್ದುಪಡಿ ಮೂಲಭೂತ ಹಕ್ಕು : ಮದ್ರಾಸ್ ಹೈಕೋರ್ಟ್
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ : ಆಧಾರ್ ಕಾರ್ಡ್ ತಿದ್ದುಪಡಿ ಅಥವಾ ಆಧಾರ್ ಕಾರ್ಡ್‌ನಲ್ಲಿನ ದೋಷಗಳನ್ನು ಸರಿಪಡಿಸುವ ಹಕ್ಕು ಶಾಸನಬದ್ಧ ಮತ್ತು ಮೂಲಭೂತ ಹಕ್ಕು ಎಂದು ಮದ್ರಾಸ್ ಹೈಕೋರ್ಟ್ ಮಧುರೈ ಪೀಠ ತೀರ್ಪು ನೀಡಿದೆ.
ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು, ಆಧಾರ್ ಮೂಲಕ ಪ್ರಯೋಜನಗಳನ್ನು ಪಡೆಯುವ ಹಕ್ಕಿನ ಜೊತೆಗೆ ಅದರ ವಿವರಗಳನ್ನು ತಿದ್ದಿಕೊಳ್ಳುವುದು ಕೂಡ ಮೂಲಭೂತ ಹಕ್ಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಾಗರಿಕರು ಯಾವುದೇ ಅಡೆತಡೆಯಿಲ್ಲದೆ ಈ ಹಕ್ಕನ್ನು ಪಡೆಯುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡುವಂತೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ)ಕ್ಕೆ ಸೂಚನೆ ನೀಡಿದ್ದಾರೆ.
ತಮಿಳುನಾಡಿನ ಪರಮಕುಡಿಯ ನಿವಾಸಿ 74 ವರ್ಷದ ವಿಧವೆ ಪಿ.ಪುಷ್ಪಮ್ ಅವರು ಸಲ್ಲಿಸಿದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಆಧಾರ್ ಕಾರ್ಡ್‌ನಲ್ಲಿ ಪುಷ್ಬಮ್ ಎಂದು ಅವರ ಹೆಸರನ್ನು ಬರೆದಿರುವುದರಿಂದ ಮತ್ತು ಜನ್ಮ ದಿನಾಂಕವನ್ನು ತಪ್ಪಾಗಿ ದಾಖಲಿಸಿದ್ದರಿಂದ ಅವರ ಪಿಂಚಣಿ ವಿಳಂಬವಾಗಿತ್ತು.
ಪುಷ್ಪಮ್ ಅವರ ಪತಿ ಭಾರತೀಯ ಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಮಾಜಿ ಸೈನಿಕರಾಗಿದ್ದು ಮೇ 2025 ರಲ್ಲಿ ನಿಧನರಾಗಿದ್ದರು. ಅವರು ಪಿಂಚಣಿ ವರ್ಗಾವಣೆಗೆ ಅರ್ಜಿ ಸಲ್ಲಿಸಿದಾಗ ಅವರ ಆಧಾರ್ ವಿವರಗಳು ಪಿಂಚಣಿ ದಾಖಲೆಗಳಿಗೆ ಹೊಂದಿಕೆಯಾಗದ ಕಾರಣ ಸಮಸ್ಯೆಯಾಗಿದೆ. ಇ-ಸೇವೆ ಮತ್ತು ಅಂಚೆ ಕೇಂದ್ರಗಳ ಮೂಲಕ ತಿದ್ದುಪಡಿಗಳನ್ನು ಮಾಡಲು ಅವರು ಪದೇ ಪದೇ ಮಾಡಿದ ಪ್ರಯತ್ನಗಳು ವಿಫಲವಾಗಿದ್ದವು. ಇದರಿಂದಾಗಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು.