‘ವಂದೇ ಮಾತರಂ’ನ ಮೊದಲ ಎರಡು ಚರಣ ಬಳಸುವ ನಿರ್ಧಾರ ನೆಹರೂ ಒಬ್ಬರದ್ದಲ್ಲ: ಖರ್ಗೆ
ಮಲ್ಲಿಕಾರ್ಜುನ ಖರ್ಗೆ | Photo Credit : PTI
ಹೊಸದಿಲ್ಲಿ, ಡಿ. 9: ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ನಾಯಕರು ಜವಾಹರ್ಲಾಲ್ ನೆಹರೂ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
‘‘ವಂದೇ ಮಾತರಂ’’ನ ಮೊದಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸಲು ಮಹಾತ್ಮಾ ಗಾಂಧಿ ಹಾಗೂ ರವೀಂದ್ರನಾಥ್ ಠಾಗೂರ್ರಂತಹ ನಾಯಕರು ಸಾಮೂಹಿಕವಾಗಿ ನಿರ್ಧಾರ ತೆಗೆದುಕೊಂಡಿದ್ದರು ಎಂದು ಅವರು ಹೇಳಿದ್ದಾರೆ.
ಕವಿತೆಯ ಕೇವಲ ಎರಡು ಚರಣಗಳನ್ನು ಮಾತ್ರ ರಾಷ್ಟ್ರೀಯ ಗೀತೆಯಾಗಿ ಬಳಸಲು ನಿರ್ಧರಿಸಲು ಕಾಂಗ್ರೆಸ್ ನ ತುಷ್ಟೀಕರಣ ರಾಜಕೀಯ ಕಾರಣ ಎಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಆರೋಪಿಸಿದರು. ಇದಾದ ತತ್ಕ್ಷಣ ಖರ್ಗೆ ‘‘ವಂದೇ ಮಾತರಂ’’ ಎಂಬ ಘೋಷಣೆಯನ್ನು ಕೂಗುವ ಮೂಲಕ ತಮ್ಮ ಭಾಷಣವನ್ನು ಆರಂಭಿಸಿದರು.
‘‘1921ರಲ್ಲಿ ಅಸಹಕಾರ ಚಳುವಳಿ ಆರಂಭವಾದಾಗ, ಕಾಂಗ್ರೆಸ್ ಸದಸ್ಯರು ವಂದೇ ಮಾತರಂ ಜಪಿಸಿ ಜೈಲಿಗೆ ಹೋಗುತ್ತಿದ್ದರು. ನೀವು ಏನು ಮಾಡುತ್ತಿದ್ದಿರಿ? ನೀವು ಬ್ರಿಟೀಷರಿಗಾಗಿ ಕೆಲಸ ಮಾಡುತ್ತಿದ್ದಿರಿ’’ ಎಂದು ಖರ್ಗೆ ಹೇಳಿದರು.
‘‘ನೀವು ನಮಗೆ ದೇಶ ಭಕ್ತಿಯನ್ನು ಬೋಧಿಸುತ್ತಿದ್ದೀರಿ. ನೀವು ಸ್ವಾತಂತ್ರ್ಯ ಚಳುವಳಿಯನ್ನು ಬೆಂಬಲಿಸಲು ಹೆದರುತ್ತಿದ್ದಿರಿ. ಬ್ರಿಟೀಷರಿಗಾಗಿ ಕೆಲಸ ಮಾಡುತ್ತಿದ್ದೀರಿ’’ ಎಂದು ಅವರು ತಿಳಿಸಿದರು.
ಕವಿತೆಯ ಎರಡು ಚರಣವನ್ನು ಮಾತ್ರ ಹಾಡುವ ನಿರ್ಣಯವನ್ನು ಕಾಂಗ್ರೆಸ್ ನ ಕಾರ್ಯಕಾರಿ ಸಮಿತಿ ಅಂಗೀಕರಿಸಿತು. ನೆಹರು ಮಾತ್ರ ಈ ನಿರ್ಣಯ ಕೈಗೊಂಡಿಲ್ಲ. ಈ ನಿರ್ಣಯ ತೆಗೆದುಕೊಳ್ಳುವಾಗ ಮಹಾತ್ಮಾ ಗಾಂಧಿ, ಸುಭಾಷ್ ಚಂದ್ರ ಭೋಸ್, ಮದನ್ ಮೋಹನ್ ಮಾಳವೀಯ ಹಾಗೂ ಆಚಾರ್ಯ ಜೆ.ಬಿ. ಕೃಪಲಾನಿಯಂತಹ ನಾಯಕರು ಸಭೆಯಲ್ಲಿ ಉಪಸ್ಥಿತರಿದ್ದರು ಎಂದು ಖರ್ಗೆ ಹೇಳಿದರು.
‘‘ನೀವು ಈ ಎಲ್ಲಾ ಅತ್ಯುನ್ನತ ನಾಯಕರಿಗೆ ಅವಮಾನ ಮಾಡುತ್ತಿದ್ದೀರಿ. ಅದು ಅವರ ಸಂಘಟಿತ ನಿರ್ಧಾರವಾಗಿತ್ತು. ನೀವು ನೆಹರೂ ಅವರನ್ನು ಮಾತ್ರ ಗುರಿಯಾಗಿರಿಸಿ ಯಾಕೆ ವಾಗ್ದಾಳಿ ಮಾಡುತ್ತಿದ್ದೀರಿ’’ ಎಂದು ಖರ್ಗೆ ಪ್ರಶ್ನಿಸಿದರು.