‘ಬಂಗ ಭವನ’ದಲ್ಲಿ ಎಸ್‌ಐಆರ್ ಸಂತ್ರಸ್ತ ನಿವಾಸಿಗಳಿಗೆ ದಿಲ್ಲಿ ಪೊಲೀಸರಿಂದ ಕಿರುಕುಳ, ಬೆದರಿಕೆ: ಮಮತಾ ಬ್ಯಾನರ್ಜಿ ಆರೋಪ
ಮಮತಾ ಬ್ಯಾನರ್ಜಿ | Photo Credit : PTI
ಹೊಸದಿಲ್ಲಿ: ದಿಲ್ಲಿಯಲ್ಲಿರುವ ‘ಬಂಗ ಭವನ’ದ ಹೊರಗಡೆ ಭಾರೀ ಪ್ರಮಾಣದಲ್ಲಿ ಪೊಲೀಸರ ನಿಯೋಜನೆ ಮತ್ತು ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ನೀಡಲಾಗುತ್ತಿದೆ ಎನ್ನಲಾದ ಕಿರುಕುಳವನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಪ್ರತಿಭಟಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಗ ಭವನದಲ್ಲಿ ವಾಸಿಸುತ್ತಿರುವ ಪಶ್ಚಿಮ ಬಂಗಾಳದ ಜನರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಹೇಳಿದರು ಹಾಗೂ ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ್ ನಿಯೋಜನೆಯನ್ನು ಪ್ರಶ್ನಿಸಿದರು. ಆದರೆ, ನಾನು ಪೊಲೀಸರನ್ನು ದೂರುವುದಿಲ್ಲ, ನಾನು ದೂರುವುದು ‘‘ಮೇಲಿನವರನ್ನು’’ ಎಂದು ಅವರು ಹೇಳಿದರು.
ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್‌ರನ್ನು ಭೇಟಿಯಾಗಲು ಮಮತಾ ಬ್ಯಾನರ್ಜಿ ರವಿವಾರ ಹೊಸದಿಲ್ಲಿಗೆ ಬಂದಿದ್ದಾರೆ. ಅವರು ಹೊಸದಿಲ್ಲಿಯಲ್ಲಿರುವ ಪಶ್ಚಿಮಬಂಗಾಳ ಸರಕಾರದ ಅತಿಥಿಗೃಹ ಬಂಗ ಭವನದಲ್ಲಿ ತಂಗಿದ್ದಾರೆ.
ಕಟ್ಟಡದ ಹೊರಗೆ ನಿಯೋಜಿಸಲಾಗಿರುವ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಅವರು, ನಾನಿಲ್ಲಿಗೆ ಬಂದಿರುವುದು ಪ್ರತಿಭಟನೆ ನಡೆಸಲು ಅಲ್ಲ, ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೆ ನ್ಯಾಯ ಕೊಡಿಸುವುದಕ್ಕಾಗಿ ಎಂದು ಅವರು ಹೇಳಿದರು.
‘‘ಪಶ್ಚಿಮಬಂಗಾಳದ ಜನರಿಗೆ ಬಂಗ ಭವನದಲ್ಲಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ದಾವೆ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದೆ. ನಮಗೆ ಚುನಾವಣಾ ಆಯೋಗವನ್ನು ಭೇಟಿಯಾಗಲಿಕ್ಕಿದೆ. ಅಧಿಕೃತ ಅನುಮೋದನೆ ಪಡೆದುಕೊಂಡೇ ನಾವು ಇಲ್ಲಿಗೆ ಬಂದಿದ್ದೇವೆ. ಮತದಾರರ ಪಟ್ಟಿ ಪರಿಷ್ಕರಣೆ ಕಾರಣಕ್ಕಾಗಿ ಜನರು ಮೃತರಾಗಿದ್ದಾರೆ. ಅವರ ಕುಟುಂಬಗಳು ಮಾಧ್ಯಮಗಳೊಂದಿಗೆ ಮಾತನಾಡಬಾರದೇ?’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಮತಾ ಪ್ರಶ್ನಿಸಿದರು.