ಮಹಾರಾಷ್ಟ್ರ ಡಿಸಿಎಂ ಆಗಿ ಸುನೇತ್ರಾ ಪವಾರ್ ನೇಮಕದ ಹಿಂದೆ ಬಿಜೆಪಿ ಕೈವಾಡ: ಶಿವಸೇನೆ
ಸುನೇತ್ರಾ ಪವಾರ್ | Photo Credit : PTI
ಮುಂಬೈ,ಫೆ.2: ಪತಿ ಅಜಿತ್ ಪವಾರ್ ಅವರ ನಿಧನದ ಕೆಲವೇ ದಿನಗಳಲ್ಲಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದರ ಹಿಂದೆ ಬಿಜೆಪಿ ನಾಯಕತ್ವದ ಕೈವಾಡವಿದೆ ಎಂದು ಪ್ರತಿಪಕ್ಷ ಶಿವಸೇನೆ(ಯುಬಿಟಿ) ಆರೋಪಿಸಿದೆ.
ಬಿಜೆಪಿ ನಾಯಕತ್ವ ಹಾಗೂ ಎನ್‌ಸಿಪಿ ನಾಯಕರಾದ ಸುನಿಲ್ ತತ್ಕರೆ ಮತ್ತು ಪ್ರಫುಲ್ ಪಟೇಲ್ ಅವರು ಎನ್‌ಸಿಪಿಯ ಎರಡೂ ಬಣಗಳು ಮತ್ತೆ ಒಂದಾಗುವುದನ್ನು ಬಯಸುವುದಿಲ್ಲ ಎಂದು ಪಕ್ಷದ ಮುಖವಾಣಿ ‘ಸಾಮ್ನಾ’ದ ಸೋಮವಾರದ ಸಂಚಿಕೆಯಲ್ಲಿನ ಸಂಪಾದಕೀಯವು ಆರೋಪಿಸಿದೆ.
ಸುನೇತ್ರಾ ಯಾರ ಬಯಕೆಯಂತೆ ಮಹಾರಾಷ್ಟ್ರದ ಡಿಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ ಎಂದು ಪ್ರಶ್ನಿಸಿರುವ ಸಂಪಾದಕೀಯ ಲೇಖನವು, ಅಜಿತ್ ಪವಾರ್ ಅವರ ಚಿಕ್ಕಪ್ಪ ಹಾಗೂ ಎನ್‌ಸಿಪಿ(ಎಸ್‌ಪಿ) ಮುಖ್ಯಸ್ಥ ಶರದ್ ಪವಾರ್ ಮತ್ತು ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಲೆ ಅಥವಾ ಪವಾರ ಕುಟುಂಬದ ಯಾರಿಗೂ ಪ್ರಮಾಣ ವಚನ ಸ್ವೀಕಾರದ ಬಗ್ಗೆ ಗೊತ್ತೇ ಇರಲಿಲ್ಲ ಎಂದು ಬೆಟ್ಟು ಮಾಡಿದೆ.
ತಾನು ಪ್ರಮಾಣ ವಚನ ಸ್ವೀಕರಿಸಲು ಬಾರಾಮತಿಯಿಂದ ಮುಂಬೈಗೆ ತೆರಳುತ್ತಿದ್ದೇನೆ ಎಂಬ ಸುಳಿವನ್ನೂ ಸುನೇತ್ರಾ ನೀಡಿರಲಿಲ್ಲ ಎಂದು ಹೇಳಿರುವ ಶಿವಸೇನೆ(ಯುಬಿಟಿ),ಈ ರಾಜಕೀಯದ ಹಿಂದೆ ಬಿಜೆಪಿ ನಾಯಕತ್ವದ ಕೈವಾಡವಿದೆ ಎಂದು ಪ್ರತಿಪಾದಿಸಿದೆ.
ಸುನೇತ್ರಾ ಪ್ರಮಾಣ ವಚನ ಸ್ವೀಕರಿಸುವ ಬಗ್ಗೆ ತನಗೆ ತಿಳಿದಿರಲಿಲ್ಲ ಎಂದು ಶರದ್ ಪವಾರ್ ರವಿವಾರ ಹೇಳಿದ್ದರು.
ಪುಣೆ ಜಿಲ್ಲೆಯ ಬಾರಾಮತಿಯಲ್ಲಿ ಬುಧವಾರ ಸಂಭವಿಸಿದ್ದ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಮೃತಪಟ್ಟ ಬೆನ್ನಿಗೇ ಶನಿವಾರ ತರಾತುರಿಯಿಂದ ಸುನೇತ್ರಾ ಪ್ರಮಾಣ ವಚನ ಸ್ವೀಕರಿಸಿದ್ದು ಕೆಲವು ವಲಯಗಳಿಂದ ಟೀಕೆಗೆ ಗುರಿಯಾಗಿತ್ತು.