×
Ad

ಅಮೆರಿಕದ ಬೆದರಿಕೆಯಿಂದಾಗಿ ರಷ್ಯಾದಿಂದ ತೈಲ ಖರೀದಿ ತೀವ್ರವಾಗಿ ಇಳಿಕೆಯಾಗಿದೆ: ಪಿ.ಚಿದಂಬರಂ

Update: 2026-02-02 14:49 IST

Photo| ANI

ಹೊಸದಿಲ್ಲಿ, ಫೆ. 2: ಅಮೆರಿಕದ ಬೆದರಿಕೆ ಹಿನ್ನೆಲೆಯಲ್ಲಿ ರಷ್ಯಾದಿಂದ ಭಾರತದ ಕಚ್ಚಾ ತೈಲ ಖರೀದಿ ತೀವ್ರವಾಗಿ ಇಳಿಕೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಹೇಳಿದ್ದಾರೆ. ಭಾರತಕ್ಕೆ ತೈಲ ಲಭ್ಯವಿರುವ ಯಾವುದೇ ಮೂಲದಿಂದ ಖರೀದಿ ಮಾಡುವ ಹಕ್ಕು ಇದೆ ಎಂದು ಹೇಳಿದ್ದಾರೆ.  

ಭಾರತದ ತೈಲ ಆಮದು ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಬಗ್ಗೆ ಸುದ್ದಿಸಂಸ್ಥೆ ANI ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಪಿ. ಚಿದಂಬರಂ, ಭಾರತ–ಅಮೆರಿಕ ನಡುವೆ ಯಾವ ರೀತಿಯ ಒಪ್ಪಂದ ನಡೆದಿದೆ ಎಂಬುದು ತನಗೆ ತಿಳಿದಿಲ್ಲ. “ರಷ್ಯಾ, ವೆನೆಝುವೆಲಾ ಅಥವಾ ಯಾವುದೇ ದೇಶದಿಂದ ಸಮಂಜಸ ಬೆಲೆಗೆ ತೈಲ ದೊರೆತರೆ ನಾವು ಖರೀದಿಸಬೇಕು,” ಎಂದು ಹೇಳಿದರು.

ವೆನೆಝುವೆಲಾದಿಂದ ತೈಲ ಖರೀದಿಯಲ್ಲಿ ತಾಂತ್ರಿಕ ಅಥವಾ ರಾಜತಾಂತ್ರಿಕ ಅಡೆತಡೆಗಳಿದ್ದರೆ ಅದರ ವಿವರಗಳು ವಿದೇಶಾಂಗ ಸಚಿವಾಲಯ ಮತ್ತು ಪ್ರಧಾನ ಮಂತ್ರಿ ಕಚೇರಿಗೆ ಮಾತ್ರ ತಿಳಿದಿರುತ್ತವೆ. “ಅಮೆರಿಕದ ಬೆದರಿಕೆಯಿಂದ ರಷ್ಯಾದಿಂದ ನಮ್ಮ ತೈಲ ಖರೀದಿ ಕಡಿಮೆಯಾಗಿದೆ. ಈಗ ವೆನೆಝುವೆಲಾದಿಂದ ತೈಲ ಸಮಂಜಸ ಬೆಲೆಗೆ ದೊರೆತರೆ ಖರೀದಿಸದಿರಲು ಕಾರಣವೇನು? ಆದರೆ ಸಾಧ್ಯವಿರುವ ತೊಡಕುಗಳ ಬಗ್ಗೆ ನನಗೆ ಸ್ಪಷ್ಟತೆ ಇಲ್ಲ,” ಎಂದರು.

ಇರಾನ್‌ನ ಬದಲು ವೆನೆಝುವೆಲಾದಿಂದ ಭಾರತ ತೈಲ ಖರೀದಿಸಲಿದೆ ಎಂಬ ಟ್ರಂಪ್ ಹೇಳಿಕೆ ಕುರಿತು ಬಜೆಟ್ ನಂತರದ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಗೆ ಚಿದಂಬರಂ ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದರು. “ನಾನು ಅಧ್ಯಕ್ಷ ಟ್ರಂಪ್ ಅವರ ಪತ್ರಿಕಾ ಕಾರ್ಯದರ್ಶಿ ಅಲ್ಲ; ದಯವಿಟ್ಟು ಭಾರತದ ಬಜೆಟ್ ಕುರಿತು ಪ್ರಶ್ನಿಸಿ,” ಎಂದು ಹೇಳಿದರು.

ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಟ್ರಂಪ್, ಭಾರತ ಈಗಾಗಲೇ ಇರಾನ್ ಬದಲಿಗೆ ವೆನೆಝುವೆಲಾದಿಂದ ಕಚ್ಚಾ ತೈಲ ಖರೀದಿಸಲು ಒಪ್ಪಂದ ಮಾಡಿಕೊಂಡಿದೆ ಎಂದು ಹೇಳಿಕೊಂಡಿದ್ದರು. ಈ ಕುರಿತು ಭಾರತ ಸರಕಾರ ಇನ್ನೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News