ಬೆಂಗಳೂರಿಗೆ ಆಗಮಿಸಬೇಕಿದ್ದ Air India ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ; ತಪ್ಪಿದ ಸಂಭಾವ್ಯ ಅನಾಹುತ
ಏರ್ ಇಂಡಿಯಾ ವಿಮಾನ | Photo Credit : PTI
ಹೊಸದಿಲ್ಲಿ: ಕಳೆದ ವರ್ಷ ಅಹ್ಮದಾಬಾದ್‌ನಲ್ಲಿ ಸಂಭವಿಸಿದ್ದ ಏರ್ ಇಂಡಿಯಾ ವಿಮಾನ ಅಪಘಾತದ ಕುರಿತು ತನಿಖೆಯ ನಡುವೆಯೇ ಸೋಮವಾರ ಲಂಡನ್‌ನಿಂದ ಬೆಂಗಳೂರಿಗೆ ಆಗಮಿಸಬೇಕಿದ್ದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಂಡು ಬಂದಿದ್ದು, ವಿಮಾನವನ್ನು ಕಾರ್ಯಾಚರಣೆಯಿಂದ ಹಿಂದೆಗೆದುಕೊಳ್ಳಲಾಗಿದೆ ಎಂದು ವಾಯುಯಾನ ಸಂಸ್ಥೆಯ ವಕ್ತಾರರೋರ್ವರು ತಿಳಿಸಿದರು.
‘ಹಾರಾಟವನ್ನು ಆರಂಭಿಸುವ ಮುನ್ನ ತಪಾಸಣೆ ನಡೆಸಿದ್ದ ನಮ್ಮ ಪೈಲಟ್ ಓರ್ವರು ಇಂಧನ ಸ್ವಿಚ್‌ನಲ್ಲಿ ಸಂಭಾವ್ಯ ದೋಷವನ್ನು ಪತ್ತೆ ಹಚ್ಚಿದ್ದರು. ಇಂಜಿನ್ ಚಾಲೂ ಮಾಡುವ ಸಂದರ್ಭದಲ್ಲಿ ಸ್ವಿಚ್ ಎರಡು ಸಲ ‘ರನ್’ ಸ್ಥಿತಿಯಲ್ಲಿ ಇರಲು ವಿಫಲಗೊಂಡಿತ್ತು ಮತ್ತು ‘ಕಟ್‌ಆಫ್’ ಸ್ಥಿತಿಗೆ ಚಲಿಸಿತ್ತು. ಮಾಹಿತಿ ಲಭಿಸಿದ ತಕ್ಷಣ ನಾವು ವಿಮಾನದ ಹಾರಾಟವನ್ನು ನಿಲ್ಲಿಸಿದ್ದೇವೆ ಮತ್ತು ಸಂಪೂರ್ಣ ತಪಾಸಣೆ ನಡೆಸುತ್ತಿದ್ದೇವೆ. ನಾಗರಿಕ ವಾಯುಯಾನ ಮಹಾ ನಿರ್ದೇಶನಾಲಯಕ್ಕೆ (ಡಿಜಿಸಿಎ) ಈ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂದರು.
ಕಳೆದ ವರ್ಷದ ಅಪಘಾತದ ಬಳಿಕ ಡಿಜಿಸಿಎ ನಿರ್ದೇಶನದ ಮೇರೆಗೆ ಏರ್ ಇಂಡಿಯಾ ತನ್ನ ಎಲ್ಲ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳ ತಪಾಸಣೆ ನಡೆಸಿತ್ತು ಮತ್ತು ಯಾವುದೇ ಸಮಸ್ಯೆ ಕಂಡು ಬಂದಿರಲಿಲ್ಲ ಎಂದು ಅವರು ತಿಳಿಸಿದರು.
ಜುಲೈ 2025ರಲ್ಲಿ ಅಹ್ಮದಾಬಾದ್ ವಿಮಾನ ನಿಲ್ದಾಣದ ಸಮೀಪ ಸಂಭವಿಸಿದ್ದ ಡ್ರೀಮ್‌ಲೈನರ್ ಅಪಘಾತ ಪ್ರಕರಣದಲ್ಲಿ ತನಿಖಾಧಿಕಾರಿಗಳ ಪ್ರಾಥಮಿಕ ವರದಿಯು, ವಿಮಾನವು ಟೇಕ್‌ಆಫ್ ಆದ ಕೆಲವೇ ಸೆಕೆಂಡ್‌ಗಳ ಬಳಿಕ ಇಂಧನ ನಿಯಂತ್ರಣ ಸ್ವಿಚ್‌ಗಳು ಅಲ್ಪಾವಧಿಗೆ ಆಫ್ ಆಗಿದ್ದರಿಂದ ಇಂಜಿನ್‌ಗೆ ಇಂಧನದ ಕೊರತೆಯಾಗಿತ್ತು ಎಂದು ಸೂಚಿಸಿತ್ತು. ಈ ದುರಂತದಲ್ಲಿ 260 ಜನರು ಸಾವನ್ನಪ್ಪಿದ್ದರು.