×
Ad

ಮನ್ ಕಿ ಬಾತ್ | ಖಾದಿ, ಕೈಮಗ್ಗದ ಉತ್ಪನ್ನಗಳನ್ನು ಖರೀದಿಗೆ ಮೋದಿ ಕರೆ

Update: 2024-07-28 21:07 IST

ನರೇಂದ ಮೋದಿ | PTI 

ಹೊಸದಿಲ್ಲಿ : ಪ್ರಧಾನಿ ನರೇಂದ ಮೋದಿ ರವಿವಾರ ತನ್ನ ಮಾಸಿಕ ಬಾನುಲಿ ಭಾಷಣ ‘ ಮನ್ ಕಿ ಬಾತ್’ನಲ್ಲಿ ಪ್ಯಾರಿಸ್ನಲ್ಲಿರುವ ಒಲಿಂಪಿಕ್ ಕ್ರೀಡಾಪಟುಗಳಿಗೆ ಹುರಿದುಂಬಿಸಿದ್ದಾರೆ ಹಾಗೂ ಗಣಿತದ ಒಲಿಂಪಿಯಾಡ್ ವಿಜೇತರ ಜೊತೆ ಸಂವಾದ ನಡೆಸಿದರು. ಖಾದಿ ಹಾಗೂ ಕೈಮಗ್ಗದ ಉತ್ಪನ್ನಗಳನ್ನು ಖರೀದಿಸುವಂತೆ ಅವರು ನಾಗರಿಕರನ್ನು ಆಗ್ರಹಿಸಿದರು.

ಪ್ಯಾರಿಸ್ ಒಲಿಂಪಿಕ್ ಕ್ರೀಡಾಕೂಟದ ಭಾರತೀಯ ಕ್ರೀಡಾಪಟುಗಳಿಗೆ ಶುಭ ಹಾರೈಸಿದ ಪ್ರಧಾನಿಯವರು, ಭಾರತದ ಧ್ವಜವನ್ನು ಜಾಗತಿಕ ವೇದಿಕೆಯಲ್ಲಿ ಅರಳಿಸುವ ಅವಕಾಶವನ್ನು ಹಾಗೂ ದೇಶಕ್ಕಾಗಿ ಏನನ್ನಾದರೂ ಮಾಡುವ ಅವಕಾಶವನ್ನು ಒಲಿಂಪಿಕ್ಸ್ ನಮ್ಮ ಆಟಗಾರರಿಗೆ ನೀಡಿದೆ ಎಂದು ಹೇಳಿದರು.

ಅಂತಾರಾಷ್ಟ್ರೀಯ ಗಣಿತ ಒಲಿಂಪಿಯಾಡ್ನಲ್ಲಿ ಶ್ರೇಷ್ಠ ಸಾಧನೆಗೈದ ಭಾರತೀಯ ತಂಡವನ್ನು ಅವರು ತನ್ನ ಭಾಷಣದಲ್ಲಿ ಅಭಿನಂದಿಸಿದರು. ಗಣಿತ ಒಲಿಂಪಿಯಾಡ್ನಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಾದ ಆದಿತ್ಯ ವೆಂಕಟ್ ಗಣೇಶ್, ಸಿದ್ದಾರ್ಥ ಚೋಪ್ರಾ, ಅರ್ಜುನ್, ಕನವ್ ತಲ್ವಾರ್, ರುಶಿಲ್ ಮಾಥುರ್ ಹಾಗೂ ಆನಂದೋ ಬಾಧುರಿ ಜೊತೆ ಅವರು ಮಾತುಕತೆ ನಡೆಸಿದರು.

ಆಗಸ್ಟ್ 7ರಂದು ರಾಷ್ಟ್ರೀಯ ಕೈಮಗ್ಗ ದಿನವಾಗಿ ಆಚರಿಸಲಾಗುತ್ತಿರುವ ಬಗ್ಗೆ ಭಾರತೀಯರ ಗಮನಸೆಳೆದ ಪ್ರಧಾನಿ ಇತ್ತೀಚಿನ ದಿನಗಳಲ್ಲಿ ಕೈಮಗ್ಗದ ಉತ್ಪನ್ನಗಳು ಜನರ ಹೃದಯದಲ್ಲಿ ಸ್ಥಾನ ಪಡೆದಿರುವುದು ನಿಜಕ್ಕೂ ಗಮನಾರ್ಹವಾಗಿದೆ ಎಂದರು. ಹಲವಾರು ಖಾಸಗಿ ಕಂಪೆನಿಗಳು ಕೂಡಾ ಕೃತಕ ಬುದ್ದಿಮತ್ತೆ ಮೂಲಕ ಕೈಮಗ್ಗದ ಉತ್ಪನ್ನಗಳು ಹಾಗೂ ಸುಸ್ಥಿರವಾದ ಫ್ಯಾಶನ್ಗೆ ಉತ್ತೇಜನ ನೀಡುತ್ತಿವೆ ಎಂದವರು ಹೇಳಿದರು.

ಮನ್ ಕೀ ಬಾತ್ ಹೈಲೈಟ್ಸ್

1.ಕೇಂದ್ರ ಸರಕಾರದ ‘ಪಿಎಆರ್ಐ’ ಯೋಜನೆಯು, ಉದಯೋನ್ಮುಖ ಕಲಾವಿದರನ್ನು ಒಂದೇ ವೇದಿಕೆಯಡಿ ತರುತ್ತಿದೆ ಹಾಗೂ ಜಾನಪದ ಕಲೆಯನ್ನು ಜನಪ್ರಿಯಗೊಳಿಸುತ್ತಿದೆ. ರಸ್ತೆ ಬದಿಗಳು, ಗೋಡೆಗಳು ಹಾಗೂ ಅಂಡರ್ಪಾಸ್ಗಳಲ್ಲಿ ಕಂಡುಬರುವ ಸುಂದರವಾದ ಪೈಂಟಿಂಗ್ಗಳನ್ನು ಪಾರಿ ಜೊತೆ ನಂಟು ಹೊಂದಿರುವ ಕಲಾವಿದರು ರಚಿಸಿದ್ದಾರೆ.

2. ಅಸ್ಸಾಂ ಚಾರಾಯಿದೇವು ಮೈದಾಮ್ , ಯುವೆಸ್ಕೋ ವಿಶ್ವಪರಂಪರೆ ಪಟ್ಟಿಗೆ ಸೇರ್ಪಡೆಗೊಂಡ ಭಾರತದ 43ನೇ ಹಾಗೂ ಈಶಾನ್ಯ ಭಾರತದ ಪ್ರಪ್ರಥಮ ತಾಣವಾಗಿದೆ.

3. ರಾಜಸ್ಥಾನದ ರಣಥಂಬೋರ್ನಲ್ಲಿ ಆರಂಭಗೊಂಡಿರುವ ಕೊಡಲಿ ಬಂದ್ ಅಭಿಯಾನವು ಸ್ಥಳೀಯ ಸಮುದಾಯಗಳನ್ನು ಮರಗಳನ್ನು ಕಡಿಯುವುದಿಲ್ಲವೆಂದು ಶಪಥಗೈಯುವಂತೆ ಪ್ರೇರೇಪಿಸಿದೆ. ಇದರಿಂದಾಗಿ ಅರಣ್ಯಗಳ ಪುನರುಜ್ಜೀವನಕ್ಕೆ ಹಾಗೂ ವ್ಯಾಘ್ರ ಸಂತತಿಗೆ ಉತ್ತಮ ಪರಿಸರವನ್ನು ಸೃಷ್ಟಿಸಿದೆ.

4. ಹರ್ಘರ್ ತಿರಂಗ ಅಭಿಯಮಾನವು ಬಡವ, ಬಲ್ಲಿದರೆನ್ನದ ದೇಶಾದ್ಯಂತ ಸರ್ವರಲ್ಲೂ ಹುರುಪನ್ನು ಮೂಡಿಸಿದೆ. ಕಳೆದ ಸಲದಂತೆ ಈ ಸಲವೂ ಜನರು ತ್ರಿವರ್ಣಧ್ವಜದೊಂದಿಗೆ ಸೆಲ್ಫಿ ತೆಗೆದು, ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಬೇಕು.

5. ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿ. ಹೆಸರಿನಲ್ಲಿ ಒಂದು ಮರ) ಉಪಕ್ರಮದಡಿ ಇತ್ತೀಚೆಗೆ ಇಂದೋರ್ ನಗರವೊಂದರಲ್ಲಿಯೇ ಒಂದೇ ದಿನ 2 ಲಕ್ಷ ಗಿಡಗಳನ್ನು ನೆಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News