ಮಳೆ ನೀರಿನಲ್ಲಿ ಆಟವಾಡುವುದಾಗಿ ಹೇಳಿದ 10 ವರ್ಷದ ಬಾಲಕನನ್ನು ಇರಿದು ಕೊಲೆ ಮಾಡಿದ ತಂದೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮಳೆ ನೀರಿನಲ್ಲಿ ಆಟವಾಡಲು ಹೊರಗಡೆ ಹೋಗುತ್ತೇನೆಂದು ಹಠ ಹಿಡಿದ 10 ವರ್ಷದ ಬಾಲಕನನ್ನು ತಂದೆಯೋರ್ವ ಚೂರಿಯಿಂದ ಇರಿದು ಕೊಲೆ ಮಾಡಿದ ಘಟನೆ ನೈರುತ್ಯ ದಿಲ್ಲಿಯ ಸಾಗರ್‌ಪುರದಲ್ಲಿ ನಡೆದಿದೆ.
ದಿನಗೂಲಿ ಕಾರ್ಮಿಕನಾಗಿರುವ ಆರೋಪಿ ರಾಯ್(40) ತನ್ನ ಪತ್ನಿಯ ನಿಧನದ ನಂತರ ನಾಲ್ವರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ತಂದೆ ತಮ್ಮ ಸಹೋದರನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವುದನ್ನು ಇನ್ನುಳಿದ ಮಕ್ಕಳು ನೋಡಿದ್ದರು.
ಪ್ರಾಥಮಿಕ ತನಿಖೆಯಲ್ಲಿ ಬಾಲಕನಿಗೆ ಅವನ ತಂದೆಯೇ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಬಿಎನ್ಎಸ್ ಸೆಕ್ಷನ್ 103ರಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ʼಮಧ್ಯಾಹ್ನ 1.30ರ ಸುಮಾರಿಗೆ ನಮಗೆ ಆಸ್ಪತ್ರೆಯಿಂದ ಕರೆ ಬಂದಿದೆ. ನಾವು ಆಸ್ಪತ್ರೆಗೆ ತೆರಳಿದಾಗ ಬಾಲಕನಿಗೆ ಚೂರಿ ಇರಿದಿರುವುದು ಮತ್ತು ಆತನನ್ನು ಆರೋಪಿ ತಂದೆಯೇ ಆಸ್ಪತ್ರೆಗೆ ಕರೆತಂದಿರುವುದು ಕಂಡು ಬಂದಿದೆ. ಬಾಲಕ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದ್ದಾರೆ.