ಮಂಗಳೂರು ಏರ್ ಇಂಡಿಯಾ ವಿಮಾನ ದುರಂತ: 15 ವರ್ಷಗಳ ನಂತರವೂ ಸಂತ್ರಸ್ತರ ಕುಟುಂಬಗಳಿಗೆ ಮುಂದುವರಿದ ಪರಿಹಾರ ವಿತರಣೆ!
PC : thenewsminute.com
ಮಂಗಳೂರು: ಮಂಗಳೂರು ಏರ್ ಇಂಡಿಯಾ ವಿಮಾನ ದುರಂತ ಘಟಿಸಿ 15 ವರ್ಷಗಳೇ ಕಳೆದು ಹೋಗಿದ್ದರೂ, ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದ 42 ಕುಟುಂಬಗಳ ಕಾನೂನು ಹೋರಾಟದ ದುಃಸ್ವಪ್ನ ಮಾತ್ರ ಇಂದಿಗೂ ಅಂತ್ಯಗೊಂಡಿಲ್ಲ.
ಮೇ 22, 2010ರಂದು ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಖ್ಯೆ ಐಎಕ್ಸ್-812 ಮಂಗಳೂರು ಟೇಬಲ್ ಟಾಪ್ ರನ್ ವೇಯಿಂದ ಹಾರಿ ಪ್ರಪಾತಕ್ಕೆ ಬಿದ್ದ ಪರಿಣಾಮ, ಒಟ್ಟು 158 ಮಂದಿ ಪ್ರಯಾಣಿಕರು ದಾರುಣವಾಗಿ ಮೃತಪಟ್ಟಿದ್ದರು. ಈ ಭೀಕರ ದುರಂತದಲ್ಲಿ ಕೇವಲ 8 ಮಂದಿ ಪ್ರಯಾಣಿಕರು ಮಾತ್ರ ಬದುಕುಳಿದಿದ್ದರು. ಆದರೆ, ಈ ದುರಂತ ನಡೆದು ಒಂದೂವರೆ ದಶಕಕ್ಕೂ ಹೆಚ್ಚು ಕಾಲವಾಗಿದ್ದರೂ, ಹತ್ತಾರು ದುಃಖತಪ್ತ ಕುಟುಂಬಗಳು ಇಂದಿಗೂ ಕಾನೂನು ಹೋರಾಟದಲ್ಲೇ ಸಿಲುಕಿಕೊಂಡಿವೆ. ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಯು ತಮಗಾದ ಭಾರಿ ನಷ್ಟಕ್ಕೆ ಈವರೆಗೆ ಸೂಕ್ತ ಪ್ರಮಾಣದ ಪರಿಹಾರ ಒದಗಿಸುವಲ್ಲಿ ವಿಫಲವಾಗಿದೆ ಎಂದು ಈ ಸಂತ್ರಸ್ತರ ಕುಟುಂಬಗಳು ಕಾನೂನು ಹೋರಾಟ ನಡೆಸುತ್ತಿವೆ.
ಅಂತಾರಾಷ್ಟ್ರೀಯ ವಿಮಾನ ಯಾನ ರೂಢಿಯನ್ವಯ ನಾವು 75 ಲಕ್ಷ ರೂ. ನಿಶ್ಚಿತ ಪರಿಹಾರಕ್ಕೆ ಅರ್ಹವಾಗಿದ್ದರೂ, ಈ ಪರಿಹಾರ ಮೊತ್ತವನ್ನು ನಮಗೆ ನೀಡಲಾಗಿಲ್ಲ. ಬದಲಿಗೆ, ಪದೇ ಪದೇ ಸಂತ್ರಸ್ತರ ಆದಾಯ ಅಥವಾ ವಯಸ್ಸನ್ನು ಆಧರಿಸಿ ಪರಿಹಾರವನ್ನು ನಿರ್ಧಿಸುತ್ತಿರುವುದರಿಂದ, ನಮಗೆ ನೀಡಲಾಗುತ್ತಿರುವ ಪರಿಹಾರ ಮೊತ್ತದಲ್ಲಿ ಭಾರಿ ಪ್ರಮಾಣದ ಏರುಪೇರಾಗುತ್ತಿದೆ ಎಂದು ಈ ಕುಟುಂಬಗಳು ಆರೋಪಿಸುತ್ತಿವೆ.
ಉದಾಹರಣೆಗೆ, ಈ ದುರಂತದಲ್ಲಿ ತಮ್ಮ ಪುತ್ರನನ್ನು ಕಳೆದುಕೊಂಡಿರುವ ಕಾಸರಗೋಡು ನಿವಾಸಿಯಾದ ಅಬ್ದುಲ್ ಸಲಾಂ ಅವರಿಗೆ ಕಾನೂನಾತ್ಮಕವಾಗಿ ತನಗೇನು ಬಾಕಿ ಬರಬೇಕಿದೆ ಎಂದು ಅವರು ಭಾವಿಸಿದ್ದರೊ, ಅದಕ್ಕಿಂತಲೂ ಕಡಿಮೆ ಮೊತ್ತದ ಪರಿಹಾರ ವಿತರಣೆಯ ಪ್ರಸ್ತಾವವನ್ನು ಅವರ ಮುಂದಿರಿಸಲಾಗಿದೆ. ಒಂದು ವೇಳೆ ಈ ಮೊತ್ತದ ಪರಿಹಾರವನ್ನೇನಾದರೂ ಸ್ವೀಕರಿಸಲು ಸಿದ್ಧವಿರದಿದ್ದರೆ, ನೀವು ನ್ಯಾಯಾಲಯಕ್ಕೆ ಹೋಗಬಹುದು ಎಂಬ ಷರತ್ತಿನೊಂದಿಗೆ 35 ಲಕ್ಷ ರೂ. ಪರಿಹಾರ ಮೊತ್ತದ ವಿತರಣೆ ಪ್ರಸ್ತಾವವನ್ನು ಅವರ ಮುಂದಿರಿಸಲಾಗಿದೆ.
ಇದರಿಂದ ಒತ್ತಡಕ್ಕೊಳಗಾದ ಹಾಗೂ ಸಂಪೂರ್ಣ ಕಾನೂನಿನ ಅರಿವಿರದ ಅಬ್ದುಲ್ ಸಲಾಂರಂತಹ ಅದೆಷ್ಟೊ ಕುಟುಂಬಗಳು ಈ ಅಲ್ಪಪ್ರಮಾಣದ ಪರಿಹಾರವನ್ನು ಸ್ವೀಕರಿಸಿವೆ. ಈ ಕುರಿತು ಪ್ರತಿಕ್ರಿಯಿಸಿದ ಮಂಗಳೂರು ವಿಮಾನ ಅಪಘಾತ ಸಂತ್ರಸ್ತರ ಕುಟುಂಬಗಳ ಒಕ್ಕೂಟದ ಅಧ್ಯಕ್ಷ ನಾರಾಯಣನ್ ಕಿಲ್ಲಿಂಗಮ್, “ಪರಿಹಾರ ಮೊತ್ತವು ಮಕ್ಕಳಿಗೆ ತಲಾ 25 ಲಕ್ಷ ರೂ. ಹಾಗೂ ವಯಸ್ಕರಿಗೆ 60 ಲಕ್ಷ ರೂ.ವರೆಗೆ ನಿಗದಿಪಡಿಸಲಾಗಿದೆ. ಎಲ್ಲ ಕುಟುಂಬಗಳು ಈ ಪರಿಹಾರ ಮೊತ್ತವನ್ನು ಸ್ವೀಕರಿಸಿದ್ದರೂ, ಪ್ರತಿ ಸಂತ್ರಸ್ತರಿಗೂ ಅಂದಾಜು 7.7 ಕೋಟಿ ರೂ. ಮೊತ್ತದ ಹೆಚ್ಚಳಗೊಳಿಸಿದ ಪರಿಹಾರವನ್ನು ವಿತರಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆ ಇಂದಿಗೂ ಸುಪ್ರೀಂ ಕೋರ್ಟ್ ನಲ್ಲಿ ಬಾಕಿಯುಳಿದಿದೆ” ಎಂದು ಅವರು ತಿಳಿಸಿದ್ದಾರೆ.
ಪ್ರತಿ ಸಂತ್ರಸ್ತರ ಕುಟುಂಬಗಳೂ ನಿಶ್ಚಿತ 75 ಲಕ್ಷ ರೂ. ಪರಿಹಾರಕ್ಕೆ ಅರ್ಹವಾಗಿದ್ದು, ಇದಕ್ಕೆ ಯಾವುದೇ ಆದಾಯ ಆಧಾರಿತ ಲೆಕ್ಕಾಚಾರವನ್ನು ಅನ್ವಯಿಸಲು ಸಾಧ್ಯವಿಲ್ಲ ಎಂಬುದು ಈ ಸಂಘಟನೆಯ ವಾದವಾಗಿದೆ.
ಮಂಗಳೂರು ವಿಮಾನ ದುರಂತ ಸಂಭವಿಸುತ್ತಿದ್ದಂತೆಯೆ, ಪ್ರತಿ ವಯಸ್ಕ ಪ್ರಯಾಣಿಕರಿಗೆ 10 ಲಕ್ಷ ರೂ., 12 ವರ್ಷ ವಯಸ್ಸಿನ ಕೆಳಗಿನ ಪ್ರಯಾಣಿಕರಿಗೆ ತಲಾ 5 ಲಕ್ಷ ರೂ. ಹಾಗೂ ಪ್ರತಿ ಗಾಯಾಳು ಪ್ರಯಾಣಿಕರಿಗೆ ತಲಾ 2 ಲಕ್ಷ ರೂ. ಮಧ್ಯಂತರ ಪರಿಹಾರವನ್ನು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಘೋಷಿಸಿತ್ತು. ಈ ವೇಳೆ, “ಈ ಪರಿಹಾರ ಮೊತ್ತವು ಸೂಕ್ತ ದಾಖಲೀಕರಣ ಪ್ರಕ್ರಿಯೆಗೆ ಒಳಪಟ್ಟಿದೆ. ಈ ಮಧ್ಯಂತರ ಪರಿಹಾರವನ್ನು ಲೆಕ್ಕಾಚಾರ ಮಾಡಲಾಗುವುದು ಹಾಗೂ ಅಂತಿಮ ಪರಿಹಾರವನ್ನು ಮೌಲ್ಯಮಾಪನ ಮಾಡಿದ ನಂತರ, ಮಧ್ಯಂತರ ಪರಿಹಾರವನ್ನು ಅದರೊಂದಿಗೆ ಹೊಂದಾಣಿಕೆ ಮಾಡಲಾಗುವುದು” ಎಂದೂ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಸ್ಪಷ್ಟಪಡಿಸಿತ್ತು.
ಆದರೆ, ಈ ಪ್ರಕಟನೆಗೆ ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ಬದ್ಧವಾಗುಳಿಯಲಿಲ್ಲ ಎಂದು ಸುಪ್ರೀಂ ಕೋರ್ಟ್ ನಲ್ಲಿ ಹಲವು ಅರ್ಜಿದಾರರನ್ನು ಪ್ರತಿನಿಧಿಸುತ್ತಿರುವ ವಕೀಲ ಅಬ್ದುಲ್ ಜಲೀಲ್ ಹೇಳುತ್ತಾರೆ. ಈ ಘೋಷಣೆಯನ್ವಯ ಮೃತ ಕುಟುಂಬಗಳ ಸದಸ್ಯರು ಕೇವಲ ತಲಾ 2 ಲಕ್ಷ ರೂ. ಮಧ್ಯಂತರ ಪರಿಹಾರ ಸ್ವೀಕರಿಸಿದರೆ, ಗಾಯಾಳು ಪ್ರಯಾಣಿಕರು ಕೇವಲ 50,000 ರೂ. ಮಧ್ಯಂತತರ ಪರಿಹಾರ ಸ್ವೀಕರಿಸಿದ್ದಾರೆ. ಈ ಕುರಿತು 2011ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ಸಂಧಾನ ಸಭೆಗಳಲ್ಲಿ ಮೃತ ಪ್ರಯಾಣಿಕರ ವಯಸ್ಸು, ಉದ್ಯೋಗ ಹಾಗೂ ಹಣಕಾಸು ಸ್ಥಿತಿಯಂತಹ ವಿವರಗಳನ್ನು ಲಗತ್ತಿಸಬೇಕು ಎಂದು ಮೃತ ಪ್ರಯಾಣಿಕರ ಕುಟುಂಬಗಳ ಸದಸ್ಯರಿಗೆ ಸೂಚಿಸಲಾಗಿತ್ತು ಎಂದು ಹೇಳಲಾಗಿದೆ.
ಈ ಸೂಚನೆಯನ್ನು ಸಂಧಾನ ಪ್ರಕ್ರಿಯೆಗಳ ಮೂಲಕ ಪರಿಹರಿಸಿಕೊಳ್ಳುವ ಪ್ರಯತ್ನಗಳು ವಿಫಲಗೊಂಡ ನಂತರ, ನಮಗೆ ವಿತರಿಸಲಾಗಿರುವ ಪರಿಹಾರ ಅಸಮರ್ಪಕವಾಗಿದೆ ಹಾಗೂ ಕಡ್ಡಾಯ ಕಾನೂನುಗಳನ್ನು ಪಾಲಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ 33 ಕುಟುಂಬಗಳು ಕೇರಳ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾ. ರಾಮಚಂದ್ರ ಮೆನನ್, ಸಂತ್ರಸ್ತರ ಪರ ತೀರ್ಪು ನೀಡಿ, ಸಮರ್ಥನೀಯ ಹಾಗೂ ನ್ಯಾಯಯುತ ಪರಿಹಾರವನ್ನು ಒದಗಿಸಬೇಕು ಎಂದು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆಗೆ ಆದೇಶಿಸಿದ್ದರು. ಆದರೆ, ನಂತರ ಈ ಆದೇಶವನ್ನು ವಿಭಾಗೀಯ ನ್ಯಾಯಪೀಠ ವಜಾಗೊಳಿಸಿತ್ತು.
ಈ ಕುರಿತು ಪ್ರತಿಕ್ರಿಯಿಸಿದ ಅಬ್ದುಲ್ ಜಲೀಲ್, “ಅಂತಾರಾಷ್ಟ್ರೀಯ ವಿಮಾನ ಯಾನ ಸಂಸ್ಥೆಗಳಿಗೆ ಮಾಂಟ್ರಿಯಲ್ ಒಡಂಬಡಿಕೆ ಅನ್ವಯವಾಗಲಿದ್ದು, ನಿರ್ದಿಷ್ಟವಾಗಿ ತಪ್ಪಿಲ್ಲದ ಹೊಣೆಗಾರಿಕೆಗೆ ಸಂಬಂಧಿಸಿದ ಪ್ರಯಾಣಿಕರಿಗೆ ಈ ಒಡಂಬಡಿಕೆ ಅನ್ವಯವಾಗಲಿದೆ. ಇಂತಹ ಪ್ರಕರಣಗಳಲ್ಲಿ, ಯಾವುದೇ ಸಾವು ಸಂಭವಿಸಿದರೆ ಅಥವಾ ಗಾಯವಾದರೆ, ಅದಕ್ಕೆ ವಿಮಾನ ಯಾನ ಸಂಸ್ಥೆಯನ್ನು ಹೊಣೆ ಎಂದು ಭಾವಿಸಬೇಕಾಗುತ್ತದೆಯೆ ಹೊರತು, ಪ್ರಯಾಣಿಕನನ್ನಲ್ಲ. ಒಂದು ವೇಳೆ ಸಂತ್ರಸ್ತ ಪ್ರಯಾಣಿಕನು ಮಗುವಾಗಿದ್ದರೂ, ಆತನ ವಯಸ್ಸು ಅಥವಾ ಗುರುತನ್ನು ಹೊರತುಪಡಿಸಿ ಇದು ಸತ್ಯವಾಗಿದೆ” ಎಂದು ಹೇಳುತ್ತಾರೆ.
►ಮಾಂಟ್ರಿಯಲ್ ಒಡಂಬಡಿಕೆ
1999ರ ಈ ಮಾಂಟ್ರಿಯಲ್ ಒಡಂಬಡಿಕೆಗೆ ಭಾರತ ಸಮ್ಮತಿ ಸೂಚಿಸಿದ್ದು, ವಾಯು ಮಾರ್ಗದ ಮೂಲಕ ಪ್ರಯಾಣ (ತಿದ್ದುಪಡಿ) ಕಾಯ್ದೆ, 2009ರ ಅಡಿ ರಾಷ್ಟ್ರೀಯ ಕಾನೂನನ್ನಾಗಿ ಸೇರ್ಪಡೆ ಮಾಡಲಾಗಿದೆ. ಈ ಒಡಂಬಡಿಕೆಯು ಎರಡು ಹಂತದ ಹೊಣೆಗಾರಿಕೆ ವ್ಯವಸ್ಥೆಯನ್ನು ನಿಗದಿಪಡಿಸಿದ್ದು, ಮೊದಲ ಹಂತದಲ್ಲಿ 1,00,000 ವಿಶೇಷ ಸ್ವೀಕೃತಿ ಹಕ್ಕುಗಳ (Special Drawing Rights) ನಿಶ್ಚಿಂತ ಪರಿಹಾರವನ್ನು ಕಡ್ಡಾಯಗೊಳಿಸಲಾಗಿದೆ. ಇದರನ್ವಯ, 2011ರಲ್ಲಿ ಪ್ರಯಾಣಿಕರು ತಮ್ಮ ಯಾವುದೇ ತಪ್ಪನ್ನು ಸಾಬೀತು ಪಡಿಸಬೇಕಾದ ಅಗತ್ಯವಿಲ್ಲದೆ, ಪ್ರತಿ ಕುಟುಂಬಕ್ಕೆ ಅಂದಾಜು 75 ಲಕ್ಷ ರೂ. ಅನ್ನು ಪಾವತಿ ಮಾಡಬೇಕಿತ್ತು.
ಎರಡನೆ ಹಂತದ ಹೊಣೆಗಾರಿಕೆ ವ್ಯವಸ್ಥೆಯ ಅನ್ವಯ ಸಂತ್ರಸ್ತ ಪ್ರಯಾಣಿಕರಿಗೆ ಹೆಚ್ಚುವರಿ ಪರಿಹಾರ ಒದಗಿಸುವುದಕ್ಕೆ ಅನುಮತಿ ನೀಡಲಾಗುತ್ತದೆಯಾದರೂ, ಇದಕ್ಕಾಗಿ ವಿಮಾನ ಯಾನ ಸಂಸ್ಥೆಯ ನಿರ್ಲಕ್ಷ್ಯವನ್ನು ಸಾಬೀತು ಪಡಿಸಬೇಕಾಗುತ್ತದೆ. ಇದರನ್ವಯ ಸಂತ್ರಸ್ತ ಪ್ರಯಾಣಿಕರ ಆದಾಯ, ಅವಲಂಬಿತರು, ವಯಸ್ಸು ಹಾಗೂ ಭವಿಷ್ಯದ ಗಳಿಕೆ ಸಾಮರ್ಥ್ಯವನ್ನು ಆಧರಿಸಿ ಈ ಹೆಚ್ಚುವರಿ ಪರಿಹಾರವನ್ನು ಲೆಕ್ಕಾಚಾರ ಮಾಡಬೇಕಾಗುತ್ತದೆ. ಮಂಗಳೂರು ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿರುವ ತನಿಖಾ ನ್ಯಾಯಾಲಯದ ಪ್ರಕಾರ, ಈ ಅಪಘಾತ ಪೈಲಟ್ ನ ಲೋಪದಿಂದ ಸಂಭವಿಸಿತ್ತು ಎಂದು ಹೇಳಲಾಗಿದೆ.
ಈ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ಮಹೇಂದ್ರ ಕೊಡ್ಕನಿ ಎಂಬ ಪ್ರಯಾಣಿಕರ ಪತ್ನಿಯಾದ ತ್ರಿವೇಣಿ ಕೊಡ್ಕನಿ ಎಂಬುವವರು ತಮ್ಮ ಪತಿಯ ಸಾವಿಗೆ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು. ಆರಂಭದಲ್ಲಿ ಅವರಿಗೆ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು 7.35 ಕೋಟಿ ರೂ. ಪರಿಹಾರವನ್ನು ಘೋಷಿಸಿತ್ತು. ಆದರೆ, ತನ್ನ ಪತಿಯ ಗಳಿಕೆಯ ಸಾಮರ್ಥ್ಯ ಹಾಗೂ ಭವಿಷ್ಯದ ಸಂಭಾವ್ಯತೆಯನ್ನು ಆಧರಿಸಿ ಇನ್ನೂ ಹೆಚ್ಚುವರಿ ಪರಿಹಾರ ನೀಡಬೇಕು ಎಂದು ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಮಾಂಟ್ರಿಯಲ್ ಒಡಂಬಡಿಕೆಯ ಪ್ರಕಾರ, ವಿಮಾನ ಯಾನ ಸಂಸ್ಥೆಯು ಮಾಂಟ್ರಿಯಲ್ ಒಡಂಬಡಿಕೆಯ ಪ್ರಕಾರ, ಕಟ್ಟುನಿಟ್ಟಾಗಿ ಈ ಹೊಣೆಗಾರಿಕೆಯನ್ನು ಹೊರಬೇಕಾಗಿರುವುದರಿಂದ, ಅರ್ಜಿ ದಾಖಲಾದ ದಿನದಿಂದ ಶೇ. 9ರಷ್ಟು ಬಡ್ಡಿ ಸೇರಿಸಿ 7.64 ಕೋಟಿ ರೂ. ಪರಿಹಾರ ವಿತರಿಸಬೇಕು ಎಂದು ಆದೇಶಿಸಿ, ಪರಿಹಾರ ಮೊತ್ತವನ್ನು ಹೆಚ್ಚಳಗೊಳಿಸಿತ್ತು. ವಿಮಾನ ಅಪಘಾತಗಳಲ್ಲಿ ವಿತರಿಸಲಾಗುವ ಪರಿಹಾರವು ಕೇವಲ ತಕ್ಷಣದ ನಷ್ಟವನ್ನು ಪ್ರತಿಫಲಿಸಬಾರದು, ಬದಲಿಗೆ, ಸಂತ್ರಸ್ತರ ಕುಟುಂಬದ ಸದಸ್ಯರ ಮೇಲಾಗುವ ದೀರ್ಘಾವಧಿ ಹಣಕಾಸು ಪರಿಣಾಮವನ್ನೂ ಪ್ರತಿಫಲಿಸಬೇಕು ಎಂದು ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಹೇಳಿತ್ತು.
“ಅವರು ಮಧ್ಯಪ್ರಾಚ್ಯದ ಕಂಪನಿಯೊಂದರಲ್ಲಿ ಪ್ರಧಾನ ವ್ಯವಸ್ಥಾಪಕರಾಗಿದ್ದರು ಹಾಗೂ ಮಾಸಿಕ 3.5 ಲಕ್ಷ ರೂ. ವೇತನ ಪಡೆಯುತ್ತಿದ್ದರು. ಆದರೆ, ಈ ಪರಿಹಾರ ಮೊತ್ತವನ್ನು ಮೋಟಾರ್ ವಾಹನಗಳ ಕಾಯ್ದೆಯಡಿ ನಿರ್ಧರಿಸಲಾಗುತ್ತದೆಯೆ ಹೊರತು, ಮಾಂಟ್ರಿಯಲ್ ಒಡಂಬಡಿಕೆ ಪ್ರಕಾರವಲ್ಲ” ಎಂದು ಅಬ್ದುಲ್ ಜಲೀಲ್ ಹೇಳುತ್ತಾರೆ.
ಯಾವುದೇ ತಪ್ಪಿಲ್ಲದ ಹೊಣೆಗಾರಿಕೆಯ ಆಚೆಗೆ ಸಂತ್ರಸ್ತರ ಅವಲಂಬಿತರು ಅನುಭವಿಸಿದ ನೋವು ಮತ್ತು ಯಾತನೆ, ಅವಲಂಬಿತರ ಭವಿಷ್ಯದ ಆದಾಯ ನಷ್ಟ ಹಾಗೂ ಸಂಬಂಧಿತ ಹಾನಿಯಂತಹ ಅನುಭವಿಸಿದ ನಷ್ಟಗಳನ್ನೂ ಈ ಪರಿಹಾರ ಒಳಗೊಂಡಿರಬೇಕು ಎಂದು ಅವರು ಹೇಳುತ್ತಾರೆ. “ಈ ಲೆಕ್ಕಾಚಾರವು ಮೋಟಾರು ವಾಹನ ಕಾಯ್ದೆಯನ್ನು ಅವಲಂಬಿಸಿರಬಾರದು. ಬದಲಿಗೆ, ಮಾಂಟ್ರಿಯಲ್ ಒಡಂಬಡಿಕೆಗೆ ಹಾಗೂ ವಿಮಾನ ಅಪಘಾತ ಪರಿಹಾರ ತತ್ವಗಳಿಗೆ ಅನ್ವಯವಾಗುವಂತಿರಬೇಕು” ಎಂದೂ ಅವರು ಅಭಿಪ್ರಾಯ ಪಡುತ್ತಾರೆ.
ಈ ಪರಿಹಾರ ಮೊತ್ತವು ಕೇವಲ ಸ್ಥಳೀಯ ಆದಾಯವನ್ನು ಮಾತ್ರ ಅವಲಂಬಿಸಿರಬಾರದು. ಬದಲಿಗೆ, ಬಹುತೇಕ ಸಂತ್ರಸ್ತರು ನಿರ್ದಿಷ್ಟವಾಗಿ ಅನಿವಾಸಿ ಭಾರತೀಯರಾಗಿರುವುದರಿಂದ, ವಿದೇಶಿ ಆಸ್ತಿಪಾಸ್ತಿ ಹಾಗೂ ವಾಹನಗಳು, ವ್ಯಾವಹಾರಿಕ ಹಿತಾಸಕ್ತಿಗಳು, ವಿಮೆ ಹಾಗೂ ಸ್ವತ್ತು ಸೇರಿದಂತೆ ಸ್ವಾಧೀನಾನುಭವಗಳನ್ನೂ ಅವಲಂಬಿಸಿರಬೇಕು. “ಇಂತಹ ದಾರುಣ ಅಪಘಾತಗಳಲ್ಲಿ ಸಂತ್ರಸ್ತರ ಸಾವಿನಿಂದ ಎಲ್ಲ ಮೂಲಗಳಿಂದಲೂ ಆಗಲಿರುವ ಆದಾಯ ನಷ್ಟವನ್ನು ಲೆಕ್ಕಾಚಾರ ಮಾಡಬೇಕು” ಎಂದು ಅವರು ಹೇಳುತ್ತಾರೆ. ವಿಮಾನ ಕಾಯ್ದೆಯ ಪರಿಚ್ಛೇದ 3 (1972)ರ ಪ್ರಕಾರ, ಪರಿಹಾರ ಮೊತ್ತವು ಈ ಪರಿಗಣನೆಗಳನ್ನು ಪ್ರತಿಫಲಿಸಬೇಕು ಎಂದು ಅವರು ಪ್ರತಿಪಾದಿಸುತ್ತಾರೆ.
ನ್ಯಾ. ರಾಮಚಂದ್ರ ಮೆನನ್ ಅವರು ಸಂತ್ರಸ್ತರ ಕುಟುಂಬಗಳ ಪರವಾಗಿ ನೀಡಿದ್ದ ಆದೇಶವನ್ನು ವಿಭಾಗೀಯ ನ್ಯಾಯಪೀಠವೊಂದು ವಜಾಗೊಳಿಸಿದ ನಂತರ, 2011ರಲ್ಲಿ ಅಬ್ದುಲ್ ಸಲಾಂ ಹಾಗೂ ಪ್ಯಾಟ್ರಿಷಿಯ ಡಿಸೋಝಾ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠದೆದುರು ಎರಡು ಸಿವಿಲ್ ಅರ್ಜಿಗಳು ದಾಖಲಾಗಿದ್ದವು. ಆದರೆ, 14 ವರ್ಷಗಳ ಕಾಲ ಈ ಕುರಿತು ಪ್ರಮಾಣ ಪತ್ರ ಸಲ್ಲಿಸಲು ಏರ್ ಇಂಡಿಯಾ ವಿಮಾನ ಯಾನ ಸಂಸ್ಥೆ ವಿಫಲಗೊಂಡಿದ್ದರಿಂದ, ಅರ್ಜಿದಾರರು ದೊಡ್ಡ ಪ್ರಮಾಣದ ಕಾನೂನು ತಂಡವನ್ನು ಎದುರುಗೊಂಡರು. “ಈಗಾಗಲೇ 14 ವರ್ಷ ಕಳೆದು ಹೋದ ನಂತರ, ಎರಡು ತಿಂಗಳ ಹಿಂದೆ ಏರ್ ಇಂಡಿಯಾ ತನ್ನ ಪ್ರತಿವಾದವನ್ನು ಮಂಡಿಸಿತು. ಈ ವಿಳಂಬ ಅಮಾನವೀಯವಾಗಿದೆ” ಎಂದು ಅಬ್ದುಲ್ ಜಲೀಲ್ ಅಭಿಪ್ರಾಯ ಪಡುತ್ತಾರೆ.
►ವಿಮಾನ ಯಾನ ಸಂಸ್ಥೆಗಳಿಂದ ಅಸ್ಥಿರ ಪರಿಹಾರ ಪ್ರಕ್ರಿಯೆಗಳು
ಮಾಂಟ್ರಿಯಲ್ ಒಡಂಬಡಿಕೆಯಡಿ ಯಾವುದೇ ತಪ್ಪಿಲ್ಲದ ಹೊಣೆಗಾರಿಕೆ ಹಾಗೂ ಅನುಭವಿಸಿದ ನಷ್ಟವನ್ನು ಆಧರಿಸಿ ಹೆಚ್ಚಳಗೊಳಿಸಿದ ಪರಿಹಾರ ಒದಗಿಸಬೇಕು ಎಂಬ ನಮ್ಮ ವಾದವನ್ನು ಸಮರ್ಪಕವಾಗಿ ಆಲಿಸಲಾಗಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ ಎನ್ನುತ್ತಾರೆ ಅಬ್ದುಲ್ ಜಲೀಲ್. “ನೀವು ಅನುಭವಿಸಿದ ನಷ್ಟ, ಯಾವುದೇ ತಪ್ಪಿಲ್ಲದ ಹೊಣೆಗಾರಿಕೆ ಹಾಗೂ ಮಾಂಟ್ರಿಯಲ್ ಒಡಂಬಡಿಕೆಯಡಿ ನಿಗದಿಪಡಿಸಲಾದ ಕನಿಷ್ಠ ಪರಿಹಾರ ಮೊತ್ತವನ್ನು ಒಟ್ಟಾಗಿ ಲೆಕ್ಕಾಚಾರ ಮಾಡಿದಾಗ, ಪ್ರಯಾಣಿಕರ ಪರಿಸ್ಥಿತಿ ಹಾಗೂ ಗಳಿಕೆಯ ಸಾಮರ್ಥ್ಯವನ್ನು ಆಧರಿಸಿ ಈ ಪರಿಹಾರ ಮೊತ್ತವು 2 ಕೋಟಿ ರೂ.ನಿಂದ 10 ಕೋಟಿ ರೂ. ಅಥವಾ ಅದಕ್ಕಿಂತ ಹೆಚ್ಚಾಗುತ್ತದೆ” ಎಂದು ಅವರು ವಿವರಿಸುತ್ತಾರೆ.
ಈ ನ್ಯಾಯಾಂಗ ಹೋರಾಟ ಮುಂದುವರಿದಿರುವಾಗಲೇ, 2020ರಲ್ಲಿ ಕೋಯಿಕ್ಕೋಡ್ ನಲ್ಲಿ ಸಂಭವಿಸಿದ ಇದೇ ವಿಮಾನ ಯಾನ ಸಂಸ್ಥೆಯ ವಿಮಾನ ಅಪಘಾತದಲ್ಲಿ ಗಾಯಾಳು ಪ್ರಯಾಣಿಕರೊಬ್ಬರು ಸುಮಾರು 5 ಕೋಟಿ ರೂ.ವರೆಗೂ ಪರಿಹಾರ ಸ್ವೀಕರಿಸಿದರೆ, ಮೃತರ ಕುಟುಂಬದ ಸದಸ್ಯರು 2 ಕೋಟಿ ರೂ.ಗಿಂತ ಕಡಿಮೆ ಪರಿಹಾರ ಸ್ವೀಕರಿಸಿದ್ದರು. ಈ ಸಂಬಂಧ ದಾಖಲಾಗಿರುವ ವಿವಿಧ ಪ್ರಕರಣಗಳು ಸೇರಿದಂತೆ ಒಟ್ಟು 65 ಪ್ರಕರಣಗಳ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ಇನ್ನೂ ಬಾಕಿಯಿದೆ.
“ಈ ವಾದದ ಕೇಂದ್ರ ಭಾಗವೇನೆಂದರೆ, ಮಾಂಟ್ರಿಯಲ್ ಒಡಂಬಡಿಕೆಯಡಿಯ ಅನುಭವಿಸಿದ ನಷ್ಟ ಹಾಗೂ ತಪ್ಪಿಲ್ಲದ ಹೊಣೆಗಾರಿಕೆ ನಿಯಮಗಳಡಿ ಈ ಎರಡೂ ಅಪಘಾತಗಳಲ್ಲಿ ವಿತರಿಸಲಾಗಿರುವ ಪರಿಹಾರದಲ್ಲಿ ಹೋಲಿಕೆ ಇಲ್ಲದಿರುವುದರಿಂದ, ಇದು ನ್ಯಾಯಯುತವಾಗಲಿ ಅಥವಾ ಸಮರ್ಥನೀಯವಾಗಲಿ ಅಲ್ಲ” ಎಂದು ಅವರು ಹೇಳಿದ್ದಾರೆ.
ಅಲ್ಲದೆ, ಪರಿಹಾರ ಪ್ರಕ್ರಿಯೆಯಲ್ಲಿನ ಅಸ್ಥಿರತೆ ಕುರಿತೂ ಅವರು ಕಳವಳ ವ್ಯಕ್ತಪಡಿಸುತ್ತಾರೆ. “ಇತ್ತೀಚೆಗೆ ಅಹಮದಾಬಾದ್ ನಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರತಿ ಸಂತ್ರಸ್ತರ ಕುಟುಂಬಗಳಿಗೂ ಸಮಾನವಾಗಿ 1.25 ಕೋಟಿ ರೂ. ಪರಿಹಾರವನ್ನು ಘೋಷಿಸಲಾಯಿತು. ಆದರೆ, ಇದು ಯಾವ ಆಧಾರದಲ್ಲಿ? ಇದಕ್ಕಾಗಿ ಯಾವ ಲೆಕ್ಕಾಚಾರವನ್ನು ಬಳಸಲಾಗಿದೆ? ಇದನ್ನು ಮಾಂಟ್ರಿಯಲ್ ಒಡಂಬಡಿಕೆಯಡಿ ಮಾಡಲಾಗಿದೆಯೊ ಅಥವಾ ಮೋಟಾರು ವಾಹನ ಕಾಯ್ದೆಯಡಿ ಮಾಡಲಾಗಿದೆಯೊ?” ಎಂದು ಅವರು ಪ್ರಶ್ನಿಸುತ್ತಾರೆ.
ಮಂಗಳೂರು ವಿಮಾನ ಅಪಘಾತಕ್ಕೆ ಸಂಬಂಧಿಸಿದ ಎರಡು ಮೇಲ್ಮನವಿ ಪ್ರಕರಣಗಳು ಸುಪ್ರೀಂ ಕೋರ್ಟ್ ಎದುರು ಬಾಕಿಯುಳಿದಿವೆ ಹಾಗೂ ಇದಕ್ಕೆ ಸಂಬಂಧಿಸಿದ 33 ಪ್ರಕರಣಗಳು ಕೇರಳ ಹೈಕೋರ್ಟ್ ಎದುರು ಬಾಕಿಯುಳಿದಿವೆ. ಸಂತ್ರಸ್ತರ ಕುಟುಂಬಗಳಿಗೆ ಇದು ಕೇವಲ ಹಣಕ್ಕೆ ಸಂಬಂಧಿಸಿದ್ದಲ್ಲ, ನ್ಯಾಯ ಮತ್ತು ಉತ್ತರದಾಯಿತ್ವಕ್ಕೆ ಸಂಬಂಧಿಸಿದ್ದು. “ಸಂತ್ರಸ್ತರು ಹಾಗೂ ಅವರ ಕುಟುಂಬಗಳು ನ್ಯಾಯಯುತ ಪರಿಹಾರ ನಿರಾಕರಣೆಗೊಳಗಾಗದಿರುವುದನ್ನು ತಡೆಯಲು ವ್ಯಾಪಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆಯಿದೆ” ಎನ್ನುತ್ತಾರೆ ಅಬ್ದುಲ್ ಜಲೀಲ್.
ಸೌಜನ್ಯ: thenewsminute.com